ನ್ಯೂಸ್ ನಾಟೌಟ್: ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ರಾಹುಲ್ ಗಾಂಧಿ ಈ ಸಲ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಸ್ಪರ್ಧೆ ಮಾಡಲಿದ್ದಾರೆ. ಈ ಹಿಂದಿನ ಲೋಕ ಸಭಾ ಚುನಾವಣೆಯಲ್ಲಿ ಅವರು ಕೇರಳದ ವಯನಾಡ್ ನಿಂದ ಸ್ಪರ್ಧೆ ಮಾಡಿದ್ದರು. ಮೇ 3ರಂದು ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ನಲ್ಲಿ ರಾಹುಲ್ ಗಾಂಧಿ ತಮ್ಮ ಬಳಿ ಎಷ್ಟು ಆಸ್ತಿ ಇದೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಅವರು 20.04 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ.
ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ರಾಹುಲ್ ಗಾಂಧಿ ಒಟ್ಟು 20.04 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಈ ಪೈಕಿ 9.24 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಇದರಲ್ಲಿ 3 ಕೋಟಿ 81 ಲಕ್ಷದ 33 ಸಾವಿರ ರೂ. ಮೌಲ್ಯದ ಷೇರುಗಳು ಮತ್ತು 15 ಲಕ್ಷದ 21 ಸಾವಿರ ರೂ. ಮೌಲ್ಯದ ಚಿನ್ನದ ಬಾಂಡ್ ಗಳು ಸೇರಿವೆ. ಸ್ಥಿರಾಸ್ತಿಯ ಮೌಲ್ಯ 11.15 ಕೋಟಿ ರೂ. ಇನ್ನು ರಾಹುಲ್ ಗಾಂಧಿ ಅವರ ಬಳಿ 55 ಸಾವಿರ ರೂ. ನಗದು ಇದೆ. ಎಸ್ಬಿಐ ಹಾಗೂ ಎಚ್ಡಿಎಫ್ ಸಿ ಬ್ಯಾಂಕ್ಗಳ ಉಳಿತಾಯ ಖಾತೆಗಳಲ್ಲಿ 26.25 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ. ಸ್ಥಿರಾಸ್ತಿ ಪೈಕಿ 9 ಕೋಟಿ 4 ಲಕ್ಷ 89 ಸಾವಿರ ರೂ. ಮೌಲ್ಯದ ಸ್ವ-ಖರೀದಿ ಆಸ್ತಿ ಹಾಗೂ 2 ಕೋಟಿ 10 ಲಕ್ಷ 13 ಸಾವಿರ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಸೇರಿದೆ.
ಅಚ್ಚರಿ ಎಂದರೆ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಂದು ಸ್ವಂತ ಮನೆ ಹೊಂದಿಲ್ಲ. ಅವರು ಕಾರು ಅಥವಾ ಇತರ ವಾಹನವನ್ನೂ ಖರೀದಿ ಮಾಡಿಲ್ಲ. ಆದರೆ ಗುರುಗ್ರಾಮದಲ್ಲಿ 9.04 ಕೋಟಿ ರೂ. ಮೌಲ್ಯದ ಸ್ವಂತ ಕಚೇರಿಯೊಂದನ್ನು ಹೊಂದಿದ್ದಾರೆ. ಹೊಸದಿಲ್ಲಿಯ ಮೆಹ್ರೌಲಿಯ ಸುಲ್ತಾನ್ಪುರ ಗ್ರಾಮದಲ್ಲಿ ಸುಮಾರು 3.778 ಎಕರೆ ಕೃಷಿ ಭೂಮಿ ಇದ್ದು, ಇದು ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರಿನಲ್ಲಿದೆ. ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಲ್ಲಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಅಲ್ಲದೆ ಫ್ಲೋರಿಡಾದ ರೋಲಿನ್ಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದಿರುವುದು ಅಫಿಡವಿಟ್ ನ ವಿವರದಲ್ಲಿ ಕಂಡು ಬಂದಿದೆ.
ಸುಮಾರು 20 ವರ್ಷಗಳ ಕಾಲ ಸೋನಿಯಾ ಗಾಂಧಿ ಅಧಿಕಾರದಲ್ಲಿದ್ದ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಶುಕ್ರವಾರ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ್ದರು. ರಾಹುಲ್ ಗಾಂಧಿ ತಮ್ಮ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು. ರಾಹುಲ್ ಗಾಂಧಿ ಅವರ ಎದುರಾಳಿಯಾಗಿ ಬಿಜೆಪಿಯಿಂದ ದಿನೇಶ್ ಪ್ರತಾಪ್ ಸಿಂಗ್ ಸ್ಪರ್ಧಿಸಲಿದ್ದಾರೆ. ಇಲ್ಲಿ ಮೇ 20ರಂದು 5ನೇ ಹಂತದಲ್ಲಿ ಮತದಾನ ನಡೆಯಲಿದೆ.