ನ್ಯೂಸ್ ನಾಟೌಟ್: ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಏಪ್ರಿಲ್ 23 ರಂದು ಗಂಭೀರವಾದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಈ ಮಾಹಿತಿಯನ್ನು ತಡವಾಗಿ ಹಂಚಿಕೊಂಡಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಅವರ ಎಸ್ಯುವಿ ಮೂರು ಬಾರಿ ಪಲ್ಟಿ ಹೊಡೆದಿದೆ ಎಂದು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷರೂ ಆಗಿದ್ದ ಬೆಂಗಳೂರಿನ ಮಾಜಿ ಪೋಲೀಸ್ ಅಧಿಕಾರಿ, ಸದ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗಂಭೀರ ಅಪಘಾತದಲ್ಲಿ ಅವರ ಪಕ್ಕೆಲುಬುಗಳು ಮುರಿದಿದ್ದು, ಬೆನ್ನು ಮೂಳೆ ಮತ್ತು ಅಂಗಾಲಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ. ಭಾಸ್ಕರ್ ರಾವ್ ಟೊಯೊಟಾ ಇನ್ನೋವಾ ಹೈಬ್ರಿಡ್ ಹೈಕ್ರಾಸ್ನಲ್ಲಿ ಇತರ ಮೂವರೊಂದಿಗೆ ಆಂಧ್ರಪ್ರದೇಶದ ಅನಂತಪುರ ಮತ್ತು ಕದ್ರಿ ನಡುವೆ ಪ್ರಯಾಣಿಸುತ್ತಿದ್ದಾಗ ಅವರ ಕಾರು ಟ್ರಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದಾಗಿ ಕಾರು ಮೂರು ಬಾರಿ ಪಲ್ಟಿ ಹೊಡೆದಿದೆ. ಸಿಟ್ ಬೆಲ್ಟ್ ಮತ್ತು ಕಾರಿನ ಏರ್ ಬ್ಯಾಗ್ಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರಿನಲ್ಲಿದ್ದ ವೆಂಕಿ ಎನ್ನುವವರು ತೀವ್ರವಾಗಿ ಗಾಯಗೊಂಡು ಐಸಿಯುನಲ್ಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಭಾಸ್ಕರ್ ರಾವ್ ಗಾಯಗೊಂಡಿದ್ದಾರೆ. ಆದರೆ, ಇತರ ಇಬ್ಬರು ಕಿರಣ ಮತ್ತು ಬಾಬು ಹೆಚ್ಚಾಗಿ ಗಾಯಗೊಂಡಿಲ್ಲ.
ಗಾಯಾಳುಗಳನ್ನು ಮೊದಲು ಬತ್ಪಾಲ್ಲಿಯ ದೂರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅನಂತಪುರಕ್ಕೆ ಸ್ಥಳಾಂತರಿಸಲಾಯಿತು. ಘಟನೆಯನ್ನು ಗುರುವಾರ ರಾತ್ರಿ ಟ್ವಿಟರ್ನಲ್ಲಿ ಬಿಜೆಪಿ ನಾಯಕ ಹಂಚಿಕೊಂಡಿದ್ದಾರೆ. ಜೊತೆಗೆ ಅಪಘಾತದ ಚಿತ್ರಗಳನ್ನು ಶೇರ್ ಮಾಡಿದ್ದಾರೆ. “ಏಪ್ರಿಲ್ 23 ರಂದು, ಟೊಯೊಟಾ ಇನ್ನೋವಾ ಹೈಬ್ರಿಡ್ ಹೈಕ್ರಾಸ್ನಲ್ಲಿ ಅನಂತಪುರ ಮತ್ತು ಕದ್ರಿ (ಆಂಧ್ರಪ್ರದೇಶ) ನಡುವೆ ಚಾಲನೆ ಮಾಡುವಾಗ ನನಗೆ ಗಂಭೀರವಾದ ರಸ್ತೆ ಅಪಘಾತವಾಗಿದೆ. ರಸ್ತೆ ನಿರ್ಮಾಣ ಮತ್ತು ಯಾವುದೇ ಎಚ್ಚರಿಕೆಯಿಲ್ಲದೆ ಲೇನ್ಗಳ ಕಾರಣದಿಂದಾಗಿ, ಟಿಪ್ಪರ್ಗೆ ಮುಖಾಮುಖಿ ಡಿಕ್ಕಿಯಾಗುವುದನ್ನು ತಪ್ಪಿಸಿ, ಎದುರಿನಿಂದ ಬರುತ್ತಿದ್ದ ಟ್ರಕ್ಗೆ ಡಿಕ್ಕಿಯಾಗಿದೆ. ಈ ವೇಳೆ ನಮ್ಮ ವಾಹನ ಮೂರು ಬಾರಿ ಪಲ್ಟಿಯಾಗಿದೆ. ನಾವು ನಾಲ್ವರೂ ಬದುಕಿದ್ದೇವೆ. ವೆಂಕಿ ತೀವ್ರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿದ್ದಾರೆ. ನನ್ನ ಪಕ್ಕೆಲುಬುಗಳು ಮತ್ತು ಬೆನ್ನುಮೂಳೆ ಮುರಿತಗಳಾಗಿವೆ. ಕಿರಣ್ ಮತ್ತು ಬಾಬು ಸುರಕ್ಷಿತವಾಗಿದ್ದಾರೆ. ಸೀಟ್ಬೆಲ್ಟ್ ಮತ್ತು ಏರ್ಬ್ಯಾಗ್ಗಳು ನಮ್ಮನ್ನು ಉಳಿಸಿದವು” ಎಂದು ಭಾಸ್ಕರ್ ರಾವ್ ಪೋಸ್ಟ್ ಮಾಡಿದ್ದಾರೆ.