ನ್ಯೂಸ್ ನಾಟೌಟ್: ಜನಸಾಮಾನ್ಯರು ಆಧಾರ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕು ಎಂಬ ನಿಯಮ ದೇಶದಾದ್ಯಂತ ಇದೆ. ಇದೀಗ ನಾಯಿಗಳು ಆಧಾರ್ ಕಾರ್ಡ್ ಹೊಂದಿರಬೇಕು ಎಂಬ ನಿಯಮ ದೆಹಲಿಯಲ್ಲಿ ಜಾರಿಗೆ ಬಂದಿರುವುದು ವಿಚಿತ್ರವಾಗಿದೆ. ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಾಯಿಗಳಿಗೂ ಆಧಾರ್ ಕಾರ್ಡ್ ಅನ್ನು ನೀಡಲಾಗಿದೆ.
ದಾರಿತಪ್ಪಿದ ನಾಯಿಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಸ್ಥಳಾಂತರ ಮಾಡಲು ಎನ್ ಜಿಓ ಈ ಕ್ರಮಗಳನ್ನು ಜಾರಿಗೆ ತಂದಿದೆ. ಈಗಾಗಲೇ ದೆಹಲಿಯಲ್ಲಿ 100 ನಾಯಿಗಳಿಗೆ ತಮ್ಮದೇ ಆದ ಆಧಾರ್ ಕಾರ್ಡ್ ಅನ್ನು ನೀಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ವರದಿ ಪ್ರಕಾರ ಈ 100 ನಾಯಿಗಳು ದೆಹಲಿಯ ಟರ್ಮಿನಲ್ 1 ವಿಮಾನ ನಿಲ್ದಾಣ, ಇಂಡಿಯಾ ಗೇಟ್ ಮತ್ತು ಪ್ರಾಣಿ ಕಾರ್ಯಕರ್ತೆ ಮಾನವಿ ರೈ ನಡೆಸುತ್ತಿರುವ ದೆಹಲಿಯ ನಾಯಿ ಆಶ್ರಯ ಸೇರಿದಂತೆ ವಿವಿಧ ಸ್ಥಳಗಳಿಗೆ ಸೇರಿವೆ ಎನ್ನಲಾಗಿದೆ. ಏಪ್ರಿಲ್ 27ರಂದು ನಾಯಿಗಳಿಗೆ ಆಧಾರ್ ಕಾರ್ಡ್ ನೀಡುವ ಕ್ರಮಕ್ಕೆ ಚಾಲನೆ ನೀಡಿದ್ದು, ಇದಕ್ಕೆ ಸಂಬಂಧಪಟ್ಟ ನಾಯಿಗಳಿಗೆ ಆಧಾರ್ ಕಾರ್ಡ್ ಟ್ಯಾಗ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಪ್ರಾಣಿ ಕಾರ್ಯಕರ್ತೆ ಮಾನವಿ ರೈ ಅವರು ನಾಯಿಗಳಿಗೆ ಈ ಆಧಾರ್ ಕಾರ್ಡ್ ಜೀವಸೆಲೆ ಎಂದು ತಿಳಿಸಿದ್ದಾರೆ.
“ಇಂದು ಈ ಕ್ಯೂಆರ್ ಆಧಾರಿತ ಟ್ಯಾಗ್ ಗಳು ನಮ್ಮ ನಾಯಿಗಳಿಗೆ ವಿಶೇಷವಾಗಿ ಸಂಕಷ್ಟದ ಸಮಯದಲ್ಲಿ ಜೀವಸೆಲೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ” ಎಂದಿದ್ದಾರೆ. ನಾಯಿಗಳಿಗೆ ನೀಡಿದ ಆಧಾರ್ ಕಾರ್ಡ್ ಕ್ಯೂ ಆರ್ ಆಧಾರಿತವಾಗಿದೆ. ಇದನ್ನು Pawfriend.in ಎಂಬ ಎನ್ ಜಿಒ ಆವಿಷ್ಕಾರ ಮಾಡಿದೆ. ಕಂಪೆನಿಯ ಪ್ರಕಾರ, ಬೀದಿ ನಾಯಿಗಳ ಆರೈಕೆಗೆ ಇದು ಉತ್ತಮ ಪರಿಹಾರವಾಗಿದೆ. ಇದು ಮೈಕ್ರೋಚಿಪ್ ಗಳನ್ನು ಒಳಗೊಂಡಿದ್ದು, ಈ ಟ್ಯಾಗ್ ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಯಾರಾದರೂ ಸ್ಕ್ಯಾನ್ ಮಾಡಿದರೆ ಆ ನಾಯಿಗಳ ಬಗ್ಗೆ ವಿವರಗಳು ಮತ್ತು ತುರ್ತು ಸಂಪರ್ಕಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಇದರಿಂದ ಕಳೆದುಹೋದ ನಾಯಿಗಳನ್ನು ಅವುಗಳ ಯಜಮಾನನೊಂದಿಗೆ ಸೇರಿಸಲು ಸಹಾಯ ಮಾಡುತ್ತದೆಯಂತೆ ಎನ್ನಲಾಗಿದೆ.