ನ್ಯೂಸ್ ನಾಟೌಟ್: ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉಚ್ಛಾಟಿತ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪನವರ ಪುತ್ರ ಕೆ ಇ ಕಾಂತೇಶ್ವಿರುದ್ಧ ಯಾವುದೇ ಅಶ್ಲೀಲ ಫೋಟೊ, ವಿಡಿಯೋ, ಸ್ಕ್ರೀನ್ ಶಾಟ್ ಅಥವಾ ಅಶ್ಲೀಲ ಆಡಿಯೊಗಳನ್ನು ಪ್ರಸಾರ ಮಾಡದಂತೆ ಬೆಂಗಳೂರಿನ ನ್ಯಾಯಾಲಯವು ಮಾಧ್ಯಮಗಳ ವಿರುದ್ಧ ಏಕಪಕ್ಷೀಯ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದೆ. ಇದಕ್ಕೆ ಕೆ ಇ ಕಾಂತೇಶ್ ಸಲ್ಲಿಸಿರುವ ಮೂಲ ದಾವೆಯ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಡಿ ಪಿ ಕುಮಾರಸ್ವಾಮಿ ಈ ಆದೇಶ ಮಾಡಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ಕೇಸ್ ಬಳಿಕ ಈಶ್ವರಪ್ಪ ಪುತ್ರನೂ ಡವಡವ ಶುರುವಾಗಿದ್ದು, ಈ ಕಾರಣದಿಂದ ಕೋರ್ಟ್ ಗೆ ಮೊರೆಹೋಗಿದ್ದರು ಎನ್ನಲಾಗಿದೆ.
1ರಿಂದ 50ನೇ ಪ್ರತಿವಾದಿಗಳು, ಅವರ ಪ್ರತಿನಿಧಿಗಳು, ಸೇವಕರು, ಏಜೆಂಟರು, ಆಡಳಿತಗಾರರು, ಅವರು ನಿಯೋಜಿಸಿದವರು ಇತ್ಯಾದಿ ಯಾರೇ ಆದರೂ ದೂರಿನಲ್ಲಿ ಉಲ್ಲೇಖಿಸಿರುವಂತೆ ಯಾವುದೇ ತೆರನಾದ ಅಶ್ಲೀಲ ವಿಡಿಯೊ ಪ್ರಸಾರ/ಮದ್ರಣ/ಹಂಚಿಕೆ ಮಾಡದಂತೆ ಪ್ರತಿವಾದಿಗಳ ವಿರುದ್ಧ ಮಧ್ಯಂತರ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದ್ದು, ಪ್ರತಿವಾದಿ ಮಾಧ್ಯಮಗಳಿಗೆ ನೋಟಿಸ್, ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಆಗಸ್ಟ್ 3ಕ್ಕೆ ಮುಂದೂಡಿದೆ. ಫಿರ್ಯಾದಿ ಕಾಂತೇಶ್ ಪರ ವಕೀಲ ಎಂ ವಿನೋದ್ ಕುಮಾರ್ “ಪ್ರತಿವಾದಿಗಳು ಇಂಟರ್ನೆಟ್, ಟಿವಿ ಮಾಧ್ಯಮ, ಪತ್ರಿಕೆಗಳಲ್ಲಿ ಫಿರ್ಯಾದಿ ವಿರುದ್ಧ ಆಕ್ಷೇಪಾರ್ಹವಾದ ಸುದ್ದಿ ಪ್ರಸಾರ/ಮುದ್ರಣ ಮಾಡುತ್ತಿದ್ದಾರೆ. ಮಾಧ್ಯಮಗಳು ಫಿರ್ಯಾದಿಯ ವರ್ಚಸ್ಸಿಗೆ ಹಾನಿ ಮಾಡಲು ಯತ್ನಿಸುತ್ತಿವೆ. ಲೋಕಸಭಾ ಚುನಾವಣೆಯಂಥ ಈ ಮಹತ್ವದ ಸಂದರ್ಭದಲ್ಲಿ ಹೆಸರು ಕೆಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಫಿರ್ಯಾದಿಗೆ ಮಾನಹಾನಿಯಿಂದ ರಕ್ಷಣೆ ಅಗತ್ಯವಾಗಿದೆ. ಹೀಗಾಗಿ, ದಾವೆ ಇತ್ಯರ್ಥವಾಗುವವರೆಗೆ ಸಂಬಂಧಿತ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಬೇಕು ಎಂದು ಕೋರಿದ್ದರು ಎನ್ನಲಾಗಿದೆ.