ನ್ಯೂಸ್ ನಾಟೌಟ್ : ಜಗಳದಲ್ಲಿ ತಾಯಿಯೇ ಮಗಳನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ(ಎ.29) ನಡೆದಿದೆ. ಶಾಸ್ತ್ರಿನಗರದ ಸಾಹಿತಿ (19) ಕೊಲೆಯಾದವರು. ಸಾಯುವ ಮುನ್ನ ಸಾಹಿತಿ ಕೂಡ ತಾಯಿ ಪದ್ಮಜಾ (60) ಗೆ ಚಾಕುವಿನಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪದ್ಮಜಾ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಪದ್ಮಜಾ ಅವರ ಪತಿ ಎರಡು ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದರು.
ಮಗಳು ಸಾಹಿತಿ ಜತೆ ಸ್ವಂತ ಮನೆಯಲ್ಲಿ ನೆಲೆಸಿದ್ದರು. ಪಿಯುಸಿ ಉತ್ತೀರ್ಣರಾಗಿರುವ ಸಾಹಿತಿ ಪದವಿಗೆ ಸೇರುವ ಸಿದ್ಧತೆಯಲ್ಲಿದ್ದರು. ಸೋಮವಾರ ರಾತ್ರಿ 7.15ರ ಸುಮಾರಿಗೆ ತಾಯಿ-ಮಗಳ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿದೆ. ತಾಯಿ, ಮಗಳಿಬ್ಬರೂ ಮನೆಯಲ್ಲಿದ್ದ ಎರಡು ಚಾಕುಗಳನ್ನು ತೆಗೆದುಕೊಂಡು ಪರಸ್ಪರ ಹೊಟ್ಟೆಗೆ ಇರಿದುಕೊಂಡಿದ್ದಾರೆ. ತೀವ್ರ ರಕ್ತಸ್ರಾವವಾಗಿ ಮಗಳು ಮೃತಪಟ್ಟಿದ್ದಾರೆ. ರಕ್ತದ ಮಡುವಿನಲ್ಲಿದ್ದ ಪದ್ಮಜಾ ಪರಿಚಯಸ್ಥರಾದ ನಾಗೇಶ್ ಅವರಿಗೆ ಕರೆ ಮಾಡಿ ಮನೆಯ ಬಳಿ ಬರುವಂತೆ ತಿಳಿಸಿದ್ದರು.
ಮನೆಯ ಬಳಿ ತೆರಳಿದ್ದ ನಾಗೇಶ್, ಕೃತ್ಯ ಕಂಡು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರು ಗಾಯಾಳು ಪದ್ಮಜಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪದ್ಮಜಾ ಅವರ ಹೊಟ್ಟೆಭಾಗಕ್ಕೆ ನಾಲ್ಕು ಇರಿತವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ತಾಯಿ, ಮಗಳು ಸೌಹಾರ್ದಯುತವಾಗಿಯೇ ಇದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಮಗಳ ಪ್ರೀತಿ ವಿಚಾರ ಅಥವಾ ಮುಂದಿನ ವಿದ್ಯಾಭ್ಯಾಸದ ಕುರಿತ ಚರ್ಚೆಗೆ ಜಗಳ ನಡೆದು ವಿಕೋಪದಲ್ಲಿ ಕೃತ್ಯ ಸಂಭವಿಸಿರುವ ಶಂಕೆಯಿದೆ. ಪದ್ಮಜಾ ಚೇತರಿಸಿಕೊಂಡು, ವಿಚಾರಣೆ ಬಳಿಕವಷ್ಟೇ ಘಟನೆಗೆ ನೈಜ ಕಾರಣ ಗೊತ್ತಾಗಲಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.