ನ್ಯೂಸ್ ನಾಟೌಟ್: ಪ್ರಕೃತಿದತ್ತವಾಗಿ ಒಲಿದು ಬರುವ ಮುಟ್ಟಿನ ಬಗ್ಗೆ ಮಹಿಳೆಯರಿಗೇ ಗೊತ್ತಿಲ್ಲದ ಹಲವಾರು ವಿಷಯಗಳಿರುತ್ತವೆ. ಮುಟ್ಟು ಆರಂಭವಾಗುವುದು ಮತ್ತು ಅಂತ್ಯವಾಗುವುದು ಇದೆರಡರ ನಡುವೆ ಬಹಳಷ್ಟು ವಿಚಾರಗಳಿವೆ. ಇವೆಲ್ಲದರ ಬಗೆಗಿನ ಕಂಪ್ಲೀಟ್ ಮಾಹಿತಿಯನ್ನು ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ | ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ವಿವರಿಸಿದ್ದಾರೆ. ಈ ಬಗೆಗಿನ ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ.
ಒಬ್ಬಳು ಹುಡುಗಿ ಋತುಮತಿಯಾದಾಗ, ಅವಳ ದೇಹ – ಮನಸ್ಸು ಹಾರ್ಮೋನು ನರರಾಸಾಯನಿಕ ಪ್ರಭಾವದ ಅಡಿಯಲ್ಲಿರುತ್ತದೆ. ಅದು ಆಕೆಯ ಭಾವನೆಗಳ ಮೇಲೆ ತೀವ್ರ ಪ್ರಭಾವ ಹೊಂದಿದೆ. ಇಪ್ಪತ್ತೆಂಟು ದಿನಗಳ ಋತುಚಕ್ರದ ಅವಧಿಯಲ್ಲಿ, ಎಷ್ಟೊಂದು ರಾಸಾಯನಿಕಗಳು ಕೆಲಸ ಮಾಡುತ್ತವೆಂಬುದನ್ನು ಪಟ್ಟಿ ಮಾಡುತ್ತಾ ಹೋದರೆ, ನೀವು ಚಕಿತರಾಗುತ್ತೀರಿ. ನಿಮ್ಮನ್ನು ಸಂತೋಷವಾಗಿಡಲು, ನಿದ್ರೆ ಮಾಡುವಂತೆ ಮಾಡಲು, ಶಾಂತವಾಗಿರಿಸಲು, ಸುಂದರವಾಗಿಡಲು, ತಲೆಯ ಕೂದಲುಗಳಿಂದ ತುಂಬಿರಲು, ಚರ್ಮದಲ್ಲಿ ನೆರಿಗೆ ಬೀಳದಂತೆ ಮಾಡಲು, ಜಿಗುಟಾದ ದ್ರವ ಸ್ರವಿಸುವ ಪೊರೆ (ಮ್ಯೂಕಸ್ ಮೆಂಬ್ರೇನ್) ನಯವಾಗಿಡಲು, ಲೈಂಗಿಕ ಕ್ರಿಯಾತ್ಮಕತೆ ಕಾಯ್ದುಕೊಳ್ಳಲು, ಹಲವು ಕಾರ್ಯಗಳನ್ನು ನಿಭಾಯಿಸಲು, ಕೆಲಸಕ್ಕೆ ಪ್ರಚೋದಿಸಲು-ಪ್ರತೀ ತಿಂಗಳು ಒಟ್ಟಾಗಿ ಭಾಗವಹಿಸುವ ಹಾರ್ಮೋನ್ ರಾಸಾಯನಿಕಗಳನ್ನು ಅವಲೋಕಿಸಿದರೆ ಇದೊಂದು ಅದ್ಭುತ ಅನ್ನಬಹುದು. ಕಠಿಣ ಕೆಲಸವೆಂದರೆ ಈ ಜೀವರಾಸಾಯನಿಕಗಳ ಗುಂಪಿನ ಯಾವ ಸದಸ್ಯ ದೇಹದಲ್ಲಿ ಹೆಣಗಾಡುತ್ತಿದೆ ಮತ್ತು ಯಾವುದಕ್ಕೆ ಸಹಾಯದ ಅಗತ್ಯ ಇದೆಯೆಂದು ಕಂಡುಕೊಳ್ಳುವುದಾಗಿದೆ.
ಮೆನೋಪಾಸ್ ಹಂತದ ಮಹಿಳೆಯ ನಿರಾಶೆಗಳು ತೀವ್ರವಾಗಿರುತ್ತವೆ ಮತ್ತು ಗುಪ್ತಗಾಮಿನಿಯಾಗಿರುತ್ತೆ. ಆಗ ದೇಹದ ಅಸಂಖ್ಯ ಅಸಮತೋಲನಗಳು ತನ್ನಿಂದ ತಾನಾಗಿ ಪ್ರಕಟಗೊಳ್ಳುತ್ತವೆ. ಇವುಗಳನ್ನು ಅರ್ಥ ಮಾಡಿಕೊಳ್ಳುವುದೇ ಜೀವಕ್ಕೆ ರಕ್ಷಕ. ನಿಮ್ಮ ಆರೋಗ್ಯವನ್ನು ಮರುಸ್ಥಾಪಿಸಲು ಅದೊಂದು ಅವಕಾಶ. ಮಹಿಳೆಯ ಬದುಕಿನ ಆರಂಭದ ದಿನಗಳು ಕುಟುಂಬ ಪೋಷಣೆ, ಬದುಕು ಕಟ್ಟಿಕೊಳ್ಳುವುದು, ಮಕ್ಕಳ ಆರೈಕೆಯಲ್ಲಿ ಕಳೆದು ಹೋಗಿರುತ್ತದೆ. ಆದುದರಿಂದ ಋತುಚಕ್ರ ನಿಲ್ಲುವ ಅವಧಿ ಅವರಿಗೆ ತಮ್ಮ ಬಗ್ಗೆ ಗಮನ ಕೊಡಲು ಸುವರ್ಣಾವಕಾಶ.
ಸಮಸ್ಯೆಗಳ ನಿವಾರಣೆಗೆ ಒಂದು ಮಾತ್ರೆ ತೆಗೆದುಕೊಳ್ಳುವುದು ನಿಮಗೆ ಆಕರ್ಷಕವಾಗಿ ಕಾಣಬಹುದು. ಆದರೆ ದೇಹದ ಕರೆಗೆ ಓಗೊಟ್ಟರೆ, ಲಕ್ಷಣಗಳನ್ನು ಪರಿಹರಿಸುವುದಲ್ಲದೆ ಮುಂದಿನ ದಿನಗಳಲ್ಲಿ ನಿಮ್ಮ ಆತ್ಮ ನಿಮಗೆ ಧನ್ಯವಾದ ಹೇಳುತ್ತದೆ. ಇದು ಸೊಂಟನೋವನ್ನು ಸರಿಪಡಿಸಿದಂತಲ್ಲ. ಹಾರ್ಮೋನುಗಳನ್ನು ಸಮತೋಲಗೊಳಿಸುವುದು ಇದಕ್ಕೂ ಮಿಗಿಲಾದ್ದು. ಈ ಅವಧಿಯನ್ನು ಹಾದುಹೋಗುವಾಗ ಏಳುಬೀಳುಗಳು ಸಾಮಾನ್ಯ. ಆದರೆ ಇದರಿಂದ ಹೊರಬರಲು ಬೇರೆ ಒಳದಾರಿಗಳಿಲ್ಲ. ಪ್ರತಿಯೊಬ್ಬರಿಗೂ ಪ್ರತ್ಯೇಕ ದಾರಿ, ಸಲಕರಣೆಗಳು ಅಗತ್ಯ ಬೀಳಬಹುದು. ದೇಹದ ಶುದ್ಧೀಕರಣ, ಚಿಕಿತ್ಸೆಯ ಮೂಲಕ ನಿಮ್ಮನ್ನು ಸರಿಯಾಗಿ ನಿದ್ರೆ ಮಾಡುವಂತೆ ಮಾಡಬಹುದು. ಇನ್ನು ಕೆಲವರಿಗೆ ಪಿಷ್ಟ ಪದಾರ್ಥಗಳಿರುವ ಆಹಾರ ಕಡಿಮೆ ಮಾಡುವ ಮೋಲಕ, ಉಪವಾಸಗಳು ಪ್ರಯೋಜನವಾಗಬಹುದು.
ಹಾರ್ಮೋನು ಕಡಿಮೆಯಾಗುವುದೆಂದರೆ ದೇಹಕ್ಕೆ ರಕ್ಷಣೆ ಕಡಿಮೆಯಾಗುವುದು. ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚುವ ಸಮಯ. ಇದರಿಂದ ಪಾರಾಗುವ ಪರಿಕರಗಳನ್ನು ನಾನು ನಿಮಗೆ ಒದಗಿಸಬಹುದು. ಆದರೆ ಅದು ಸಾಧ್ಯವಾಗುವುದು ನಿಮ್ಮ ಆದ್ಯತೆ ನೀವೆ ಆದಾಗ. ನಿಮ್ಮ ಜೀವನದ ಇತರ ಎಲ್ಲಾ ಸಮಯಕ್ಕಿಂತ ಹೆಚ್ಚಾಗಿ , ಮುಟ್ಟು ನಿಲ್ಲುವ ಸಮಯವು ನಿಮ್ಮ ದೇಹದಲ್ಲಿ ಎಲ್ಲಿ ಸಮಸ್ಯೆ ಇದೆಯೆಂಬುದನ್ನು ಪ್ರದರ್ಶಿಸುವುದು. ಈ ಮೊದಲು ಬದುಕಿನಲ್ಲಿ ಒತ್ತಡಗಳನ್ನೇ ತುಂಬಿಕೊಂಡವರಾಗಿದ್ದಲ್ಲಿ, ಈ ಅವಧಿ ತುಂಬ ತೊಡಕಿನದ್ದು. ಜೀವನದಲ್ಲಿ ಬೇಕಾಬಿಟ್ಟಿ ತಿಂದು, ಎನೂ ತೊಂದರೆ ಅನುಭವಿಸದವರಾಗಿದ್ದರೂ, ಈ ಸಮಯದಲ್ಲಿ ಸಿಕ್ಕಿ ಹಾಕಿಕೊಳ್ಳಿತ್ತೀರಿ. ಮಾನಸಿಕ ಸ್ಥಿತಿ, ಸ್ಥೀಮಿತ ಪರಿಸ್ಥಿತಿಗಳನ್ನು ಅವಲಂಬಿಸಿರದೆ, ಇನ್ನಾವುದೋ ಪ್ರಭಾವಕ್ಕೆ ಒಳಗಾಗದಂತೆ ಕಾಣಿಸುವುದು. ಇನ್ನಾವುದೋ ಗ್ರಹದ ಜೀವಿ ಬಂದು, ಮೆದುಳನ್ನು ಆಕ್ರಮಿಸಿ, ತನ್ನನ್ನು ನಿಯಂತ್ರಿಸಿದಂತೆ ಗೊಂದಲಕ್ಕೆ ದೂಡಿದಂತೆ ಭಾಸವಾಗಬಹುದು.
ಮಹಿಳೆಯರಲ್ಲಿ ಹರ್ಮೋನುಗಳು ಕೆಲಸ ಮಾಡುವ ವಿಚಾರದಲ್ಲಿ ಅನೇಕ ಅಜ್ಞಾನಗಳು ಸಮಾಜದಲ್ಲಿವೆ. ನಿಮ್ಮ ಹಾರ್ಮೋನುಗಳು ನಿಮ್ಮ ದೇಹದ ಒಂದು ಅಂಗದಿಂದ ಮಾತ್ರ ನಿಯಂತ್ರಣಗೊಳ್ಳುವುದಲ್ಲ ಎಂಬುದರ ಅರಿವು ನಿಮಗಿದೆಯೆ? ಅನೇಕ ಅಂಗಗಳ ಸಮೂಹದಿಂದ ಅದು ಹತೋಟಿಗೆ ಒಳಗಾಗಿದೆ. ಮಹಿಳೆಯ ಆರೋಗ್ಯದಲ್ಲಿ ಏರುಪೇರುಗಳಾದಾಗ ಥೈರಾಯ್ಡ್ ಗ್ರಂಥಿಯ ಸಮಸ್ಯೆಯ ಬಗ್ಗೆ ಸಂದೇಹಗಳು ಬರುತ್ತವೆ. ಆದರೆ ಥೈರಾಯ್ಡ್ ಏಕಾಂಗಿಯಾಗಿ ಕೆಲಸ ಮಾಡುವುದಿಲ್ಲ. ಮೆದುಳಿನ ಹೈಪೋಥಲಾಮಸ್ ಹಾಗೂ ಪಿಟ್ಯೂಟರಿ ಗ್ರಂಥಿಗಳಿಂದ ಅದು ನಿರ್ದೇಶನ ಪಡೆಯುತ್ತದೆ. ಥೈರಾಯ್ಡ್ ಗ್ರಂಥಿಯನ್ನು ಗುರಿಯಾಗಿಸಿ ಚಿಕಿತ್ಸೆ ನೀಡಿದ ಮಾತ್ರಕ್ಕೆ ಸಮಸ್ಯೆ ಬಗೆಹರಿಯಬಹುದು. ಇಡೀ ಗ್ರಂಥಿಗಳ ಸಮುದಾಯವನ್ನೇ ಚಿಕಿತ್ಸೆಗೆ ಒಳಗಾಗಿಸಬೇಕಾಗುತ್ತದೆ.
ಅಂತಸ್ರಾವೀ(ಎಂಡೋಕ್ರೇನ್) ಗ್ರಂಥಿಗಳು ನಿಮ್ಮ ಹಾರ್ಮೋನುಗಳ ಉತ್ಪಾದಕಗಳು. ಪ್ರತೀ ಗ್ರಂಥಿ ಕೂಡ ಈ ಸೇರಿಕೆಯ ಕಾರ್ಯಶೈಲಿಯಿಂದ ಕೂಡಿದೆ. ಇಂಥ ಗುಂಪುಗಳಿಗೆ ಪ್ರತ್ಯೇಕ ಹೆಸರು ಕೂಡಾ ಇದೆ. ಉದಾಹರಣೆಗೆ, ಹೈಪೂಥಲಾಮಸ್-ಪಿಟ್ಯುಟರಿ-ಅಡ್ರಿನಲ್(ಹೆಚ್.ಪಿ.ಎ) ಗ್ರಂಥಿಗಳು ಪರಸ್ಪರ ಸಂಬಂಧಿಸಿದ ಕಾರ್ಯಪ್ರಣಾಳಿ ಉಳ್ಳ ಒಂದು ಟೀಮ್. ಇದು ಕಾರ್ಟಿಸಾಲ್ ಹಾರ್ಮೋನ್ ಉತ್ಪಾದಿಸಿ. ಒತ್ತಡದ ಸಂದರ್ಭದಲ್ಲಿ ಶಕ್ತಿ ಮತ್ತು ಸಮಯ ಸ್ಫೂರ್ತಿಯನ್ನು ಪ್ರೇರೇಪಿಸುತ್ತದೆ. ಇನ್ನೊಂದು ಲೈಂಗಿಕ ಹಾರ್ಮೋನ್ ಟೀಮ್, ಅಂದರೆ ಹೈಪೋಥಲಾಮಸ್-ಪಿಟ್ಯುಟರಿ -ಓವರಿಯನ್(ಅಂಡಾಶಯ)(ಹೆಚ್.ಪಿ.ಓ) ಪರಸ್ಪರ ಸಂಬಂಧಿತ ಕಾರ್ಯಪ್ರಣಾಳಿ .ಇದು ನಿಮ್ಮ ಈಸ್ಟ್ರೋಜನ್, ಪ್ರೊಜೆಸ್ಟ್ರಾನ್, ಟೆಸ್ಟೋಸ್ಟರೋನ್ ಹಾರ್ಮೋನುಗಳ ನಿಯಂತ್ರಣ ಮಾಡುತ್ತದೆ.ನೀವು ನಲುವತ್ತರ ವಯಸ್ಸಿನ ಆಸುಪಾಸಿನಲ್ಲಿರುವಾಗ ಹೆಚ್.ಪಿ.ಒ.ಟೀಮ್ ಕಾರ್ಯಶಕ್ತಿ ಕಡಿಮೆಯಾಗುತ್ತದೆ. ಮೂವತ್ತು ವರ್ಷಕ್ಕೂ ಮಿಕ್ಕಿ ಕೆಲಸ ಮಾಡಿ ದಣಿದಿರುತ್ತದೆ. ಇನ್ನು ಕೆಲಸ ಮಾಡುವ ಆಸಕ್ತಿ ಅದಕ್ಕೆ ಇಲ್ಲ. ಆದರೆ ಲೈಂಗಿಕ ಹಾರ್ಮೋನುಗಳ ಅಗತ್ಯ ದೇಹಕ್ಕೆ ಇದೆ. ಆದುದರಿಂದ ಹೆಚ್.ಪಿ.ಒ.ಟೀಮ್ ತನ್ನ ಕರ್ತವ್ಯವನ್ನು ಹೆಚ್.ಪಿ.ಎ.ಟೀಮ್ ಗೆ ಹಸ್ತಾಂತರಿಸುತ್ತದೆ. ಆಗ ಈ ಎಲ್ಲಾ ಮೆನೋಪಾಸ್ ಲಕ್ಷಣಗಳು ಶುರುವಾಗುತ್ತವೆ. ಲೈಂಗಿಕ ಹಾರ್ಮೋನು ಥಟ್ಟನೆ ಕಡಿಮೆ ಆಗಿರುತ್ತದೆ. ಇದು ನಿಮ್ಮಲ್ಲಿ ಆತಂಕ, ಖಿನ್ನತೆ, ನಿದ್ರೆಯಿಲ್ಲದಿರುವುದು, ಲೈಂಗಿಕ ನಿರಾಸಕ್ತಿ, ಮಾಂಸಖಂಡಗಳು ದುರ್ಬಲವಾಗುವುದು, ತೂಕ ಹೆಚ್ಚುವುದು, ಅತಿಯಾಗಿ ಬೆವರುವುದು,ಮೈಬಿಸಿ ಏರುವುದು, ಭಾವನಾತ್ಮಕವಾಗಿ ಹುಚ್ಚರಂತೆ ಆಗುವುದು-ಎಲ್ಲವೂ ಉಂಟಾಗುತ್ತದೆ.
ಆಟದಲ್ಲಿ ಅನೇಕ ಆಟಗಾರರು
ಋತುಚಕ್ರ ನಿಲ್ಲುವ ಈ ಸಮಯದ ಹಾರ್ಮೋನುಗಳ ಆಟದಲ್ಲಿ ಅನೇಕ ಆಟಗಾರರಿದ್ದಾರೆ. ಹಾರ್ಮೋನು ಕಡಿಮೆಯಾಗಿ ಬರುವ ಲಕ್ಷಣಗಳನ್ನು ಬೆನ್ನಟ್ಟಿ ಬರುವ ಹಗಲು ವೇಷಗಳು ಅನೇಕವಿದೆ. ಚಂಡಿಕೆ, ದುರ್ಗೆ ಇತ್ಯಾದಿ ಭಯಂಕರ ರೂಪದ ದೇವರುಗಳ ಹೆಸರುಗಳನ್ನು ಹೊತ್ತ ಬೋರ್ಡುಗಳನ್ನು ಹಾಕಿಕೊಂಡು, “ಗುಪ್ತ ಸಮಸ್ಯೆಗಳಿಗೆ ಮೂರೇ ದಿನದಲ್ಲಿ ಪರಿಹಾರ” ಎಂಬ ಭರವಸೆಯ ಮಹಾಪೂರದೊಂದಿಗೆ, ಭಯಗೊಂಡ ನಿಮ್ಮನ್ನು ಮತ್ತೂ ಭಯಪಡಿಸಲು ಸಜ್ಜಾಗಿರುತ್ತಾರೆ! ಮಂತ್ರವಾದ, ಭೂತ-ಪ್ರೇತಗಳ ಬಾಧೆ ಬಿಡಿಸುವ ಈ ನಿಷ್ಣಾತರು ಜ್ಯೋತಿಷಿಗಳ ರೂಪದಲ್ಲಿ ಪ್ರತ್ಯಕ್ಷರಾಗುತ್ತಾರೆ. ಇದಕ್ಕೆ ವಿದ್ಯಾವಂತರು ಕೂಡಾ ಮರುಳಾಗುತ್ತಾರೆ! ಈಗಂತೂ,”ವೈದ್ಯ-ಜ್ಯೋತಿಷಿ-ಗುರೂಜಿ” ಎಂಬ ಮಿಶ್ರತಳಿ ಹುಟ್ಟಿಕೊಂಡು, ಅತ್ತ ವೈದ್ಯಕೀಯಜ್ಞಾನವೂ ಇಲ್ಲದೆ, ಇತ್ತ ಜ್ಯೋತಿಷ್ಯದ ಜ್ಞಾನವೂ ಇಲ್ಲದೆ, ಗುರು ಎನ್ನಿಸಿಕೊಳ್ಳುವುದಕ್ಕೆ ಅರ್ಹತೆಯೂ ಇಲ್ಲದೆ, ಜನರ ಅಜ್ಞಾನವನ್ನೇ ತಮ್ಮ ಬಂಡವಾಳವಾಗಿಸಿಕೊಂಡು, ಮಾಧ್ಯಮಗಳ ಮುಖಪುಟಗಳ ಜಾಹೀರಾತುಗಳಲ್ಲಿ ರಾರಾಜಿಸುತ್ತಾರೆ. ಕೊನೆಗೆ, ಇವುಗಳನ್ನೆಲ್ಲ ನಂಬಿ, ಹಣ-ನೆಮ್ಮದಿ ಎರಡನ್ನೂ ಕಳೆದುಕೊಂಡು ವೈದ್ಯರಲ್ಲಿಗೆ ಬರುವ ಹೊತ್ತಿಗೆ ಹೈರಾಣಾಗಿರುತ್ತಾರೆ.
ನಲುವತ್ತರಿಂದ ನಲುವತ್ತೆಂಟು ವಯಸ್ಸಿನ ಮಹಿಳೆಯಾಗಿರಬಹುದು. ಅತ್ಯುನ್ನತ ಸ್ಥಾನಮಾನ, ಅಧಿಕಾರ, ಹೆಚ್ಚು ಬೇಡಿಕೆ ಇರುವ ಉದ್ಯೋಗ ಹೊಂದಿದವಳಾಗಿರಬಹುದು. ದಿನದ ಕೊನೆಗೆ ಮನೆಗೆ ಬಂದ ನಂತರ ಕುಟುಂಬದ ಆರೈಕೆಯ ಕೆಲಸವೂ ಇದೆ. ತನ್ನ ಬಗ್ಗೆ ಯೋಚನೆ ಮಾಡಲು ಆಕೆಗೆ ಸಿಗುವ ಸಮಯ ಅತ್ಯಲ್ಪ. ಜೀವನದ ಅಗತ್ಯಗಳು, ಬೇಡಿಕೆಗಳು, ತನ್ನ ಬಗ್ಗೆ ಯೋಚಿಸಲು ಕೂಡ ಸಾಧ್ಯ ಆಗದಷ್ಟು ಆಕೆಯನ್ನು “ಬಿಸಿ” ಆಗಿಸಿದೆ. ಆದರೆ ಮೆನೋಪಾಸ್ ಲಕ್ಷಣಗಳು ಹತೋಟಿಗೆ ಬಾರದಿದ್ದಾಗ, ಜೀವನವನ್ನು ನಿಭಾಯಿಸಲು ಸಾಧ್ಯ ಆಗದೇ ಇದ್ದಾಗ ವೈದ್ಯರ ಬಳಿ ಸಲಹೆ ಪಡೆಯಲು ಬರುತ್ತಾಳೆ. ಈಸ್ಟ್ರೋಜನ್, ಪ್ರೊಜೆಸ್ಟೆರೋನ್, ಟೆಸ್ಟೋಸ್ಟೆರೋನ್ ಹಾರ್ಮೋನುಗಳ ಟೆಸ್ಟ್ ಮಾಡಿದಾಗ ಪರಿಸ್ಥಿತಿಯ ಅರಿವಾಗುತ್ತದೆ. ಆಹಾರ ಪಥ್ಯಗಳಾಗಲೀ, ವ್ಯಾಯಾಮಗಳಾಗಲೀ, ಆಕೆಯು ಗಮನವನ್ನು ತನ್ನ ಕಡೆಗೆ ತಿರುಗಿಸದೆ ಯಾವುದೇ ಸಹಾಯ ಮಾಡಲಾರದು. ಮೊದಲ ಹೆಜ್ಜೆಯೆಂದರೆ ಚಟುವಟಿಕೆಗಳಲ್ಲಿನ ಧಾವಂತವನ್ನು ನಿಧಾನಗೊಳಿಸುವುದು, ಕೆಲವು ಸಂಗತಿಗಳಿಗೆ “ಇಲ್ಲ” ಎನ್ನುವುದನ್ನು ರೂಢಿಸಿಕೊಳ್ಳುವುದು.
(ಮುಂದಿನ ಸಂಚಿಕೆಯಲ್ಲಿ ಮುಂದುವರಿಯುವುದು)
ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ. (ಬಿ.ಎ.ಎಂ.ಎಸ್.,ಎಂ.ಎಸ್.(ಆಯು)
ಆಯುರ್ವೇದ ತಜ್ಞವೈದ್ಯರು ಹಾಗೂ ಆಡಳಿತ ನಿರ್ದೇಶಕರು, ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ಕಾಣಿಯೂರು-ಸುಬ್ರಮಣ್ಯ ರಾಜ್ಯ ಹೆದ್ದಾರಿ, ಗ್ರಾಮ ಪಂಚಾಯತ್ ಸಮೀಪ, ಪಾದೆ, ನರಿಮೊಗರು, ಪುತ್ತೂರು.
ಮೊಬೈಲ್: 9740545979