ನ್ಯೂಸ್ ನಾಟೌಟ್: ನೀವು ಪ್ರೋತ್ಸಾಹಕೊಟ್ಟು ಬೆಳೆಸಿದ ಮನುಷ್ಯನಿಗೆ ನಿಯತ್ತು ಕಡಿಮೆಯಾಗಬಹುದು, ಆದರೆ ನೀವು ಸಾಕಿದ ಶ್ವಾನಕ್ಕೆ ಎಂದೂ ನಿಯತ್ತು ಕಡಿಮೆ ಆಗೋದಿಲ್ಲ. ನೀವು ಒಂದು ತುಂಡು ರೊಟ್ಟಿ ಹಾಕಿದ್ರೆ ಸಾಕು ಅದು ಜೀವನ ಪೂರ್ತಿ ನಿಮ್ಮ ಜೊತೆಯಲ್ಲಿಯೇ ಇದ್ದು ನಿಮ್ಮನ್ನು ಕಾಯುತ್ತದೆ. ಹಾಗಂತ ಶ್ವಾನಕ್ಕೆ ಕಷ್ಟ ಬಂದಾಗ ಅದನ್ನು ಬೀದಿಯಲ್ಲಿ ತಂದು ಬಿಟ್ಟು ಓಡುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಸಹೃದಯಿ ಪ್ರಾಣಿ ಪ್ರೇಮಿ ತನ್ನ ಕೈಯಾರೆ ಪುಟ್ಟ ಮಗುವಿನಂತೆ ಶ್ವಾನಕ್ಕೆ ಊಟ ಮಾಡಿಸುವ ರೀತಿ ಎಂತಹವರ ಹೃದಯವನ್ನೂ ಕರಗುವಂತೆ ಮಾಡುತ್ತದೆ.
ಇವರ ಹೆಸರು ಪ್ರಶಾಂತ್ ಮಂಡೆಕೋಲು. ಮೂಲತಃ ಸುಳ್ಯದ ಪೇರಾಲಿನವರು. ಈ ಹಿಂದೆ ದುಬೈನಲ್ಲಿ ಆಸ್ಪತ್ರೆಯೊಂದರಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡುತ್ತಿದ್ದ ಪ್ರಶಾಂತ್ ಫಾರಿನ್ ಸಾಕು ಅಂತ ಹಠಾತ್ ಊರಿಗೆ ಬಂದ್ರು. ಕಳೆದ ಆರು ತಿಂಗಳ ಹಿಂದೆ ಊರಿಗೆ ಬಂದವರಿಗೆ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕರಾಗಿ ಕೆಲಸವೂ ಸಿಕ್ಕಿತು. ಮೊದಲಿನಿಂದಲೂ ಪ್ರಾಣಿಗಳ ಬಗ್ಗೆ ವಿಶೇಷ ಒಲವು ಹೊಂದಿರುವ ಪ್ರಶಾಂತ್ ಗೆ ಕ್ಯಾಂಪಸ್ ಸುತ್ತ ಸುತ್ತುತ್ತಿದ್ದ ‘ರಾಣಿ’ ಹೆಸರಿನ ಶ್ವಾನವೂ ಜೊತೆಯಾಯಿತು. ಈ ‘ರಾಣಿ’ ಇವರ ಜೊತೆಗೆ ಮಾತ್ರವಲ್ಲ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಎಲ್ಲ ಹೆಚ್ಚಿನ ಸಿಬ್ಬಂದಿ, ವೈದ್ಯರ ಜೊತೆ ಪ್ರೀತಿಯಿಂದ ವರ್ತಿಸುತ್ತಿತ್ತು. ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಶ್ವಾನಕ್ಕೆ ಇತ್ತೀಚಿಗೆ ಒಂದು ಅಪಘಾತವಾಗಿತ್ತು. ಮಲಗಿದ್ದ ಶ್ವಾನದ ಬಾಯಿಯ ಮೇಲೆಯೇ ಬೊಲೆರೊ ಕಾರೊಂದು ಹತ್ತಿತ್ತು.
ಇದರಿಂದಾಗಿ ಶ್ವಾನದ ಹಲ್ಲಿನ ದವಡೆ ತುಂಡಾಗಿ ನೇತಾಡುತ್ತಿತ್ತು. ತಕ್ಷಣ ಪಶು ವೈದ್ಯರಿಗೆ ತೋರಿಸಲಾಯಿತು. ಸೂಕ್ತ ಚಿಕಿತ್ಸೆಯನ್ನು ಕೂಡ ನೀಡಲಾಯಿತು. ಆ ಬಳಿಕ ಇದನ್ನು ನೋಡಿಕೊಳ್ಳಲು ಪ್ರಶಾಂತ್ ಮತ್ತು ಸ್ನೇಹಿತರು ತೀರ್ಮಾನಿಸಿದರು. ಅದಕ್ಕೆ ಅನ್ನ ತಿನ್ನೋಕೆ ಆಗಲ್ಲ. ಈ ಕಾರಣಕ್ಕೆ ಪ್ರತಿ ದಿನ ಅದಕ್ಕೆ ಊಟ ಮಾಡಿಸುವುದು, ಊಟದ ಬಳಿಕ ಬಾಯಿ ಸುತ್ತ ಇರುವೆಗಳು ಬಾರದಂತೆ ತಡೆಯುವುದಕ್ಕೆ ಬಾಯಿ ತೊಳಿಸುವುದು ಎಲ್ಲವನ್ನೂ ಕೂಡ ಪ್ರಶಾಂತ್ ಮತ್ತು ಸ್ನೇಹಿತರು ಮಾಡಿದರು. ಈ ಬಗ್ಗೆ ಪ್ರಶಾಂತ್ ಮಂಡೆಕೋಲು ಹೇಳಿದ್ದು ಹೀಗೆ, ‘ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿಗಳಾಗಿರುವ ಅಕ್ಷಯ್ ಕೆ.ಸಿ ಅವರು ಶ್ವಾನದ ಬಗ್ಗೆ ಕಾಳಜಿ ತೆಗೆದುಕೊಳ್ಳುವಂತೆ ತಿಳಿಸಿದರು. ಅಗತ್ಯ ಬಿದ್ದರೆ ಇದನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿ ಎಂದು ನಮಗೆ ಸೂಚಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಶ್ವಾನ ಚೇತರಿಸಿಕೊಳ್ಳುತ್ತಿದೆ. ಅದು ಮೂಖ ಪ್ರಾಣಿ. ಅದಕ್ಕೂ ಒಂದು ಜೀವ ಇದೆ ಅಲ್ವಾ..? ಬಿಡುವು ಮಾಡಿಕೊಂಡು ಮಾಡುವ ಈ ಕೆಲಸದಲ್ಲಿ ನನಗೆ ನೆಮ್ಮದಿ ಇದೆ. ಅತ್ಯಂತ ಖುಷಿಯಿಂದ ಮಾಡುತ್ತಿದ್ದೇನೆ. ನಾನು ದುಬೈನಲ್ಲಿದ್ದಾಗಲೂ ಪ್ರಾಣಿಗಳ ಜೊತೆ ಅನನ್ಯ ಸಂಬಂಧ ಹೊಂದಿದ್ದೆ ಎಂದು ತಿಳಿಸಿದರು.