ನ್ಯೂಸ್ ನಾಟೌಟ್: ಪ್ರತಿಯೊಬ್ಬ ದೇಶವಾಸಿಗಳಿಗೂ ಕೂಡ ಮತದಾನ ಮಾಡುವ ಹಕ್ಕು ಇರುತ್ತದೆ. ಆದರೆ ಪ್ರಸಕ್ತ ಲೋಕ ಸಭಾ ಚುನಾವಣೆಯ ವೇಳೆ ಹಲವರಿಗೆ ಮತದಾನ ಮಾಡುವ ಅವಕಾಶ ಮಿಸ್ ಆಗಿದೆ ಅನ್ನುವಂತಹ ದೂರುಗಳು ಕೇಳಿ ಬಂದಿವೆ. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಅನಾಥ ವೃದ್ದೆ ಸೇರಿದಂತೆ ಹಲವು ಜನರಿಗೆ ಮತದಾನ ಮಾಡುವ ಅವಕಾಶ ತಪ್ಪಿ ಹೋಗಿದೆ.
ಇತ್ತೀಚೆಗೆ ಸಂಪಾಜೆಯ ಅನಾಥ ಅಜ್ಜಿ ಯ ಬಗ್ಗೆ ನ್ಯೂಸ್ ನಾಟೌಟ್ ನಲ್ಲಿ ಬಿಗ್ ಸ್ಟೋರಿ ಮಾಡಿದ್ದೆವು. ಈ ವಿಶೇಷ ಸ್ಟೋರಿಗೆ ರಾಜ್ಯದೆಲ್ಲೆಡೆಯಿಂದ ವ್ಯಾಪಕ ಸ್ಪಂದನೆ ದೂರಕಿತ್ತು. ಅಜ್ಜಿಗೆ ಸಹಾಯ ಮಾಡುವುದಕ್ಕೆ ಒಂದಷ್ಟು ಮಂದಿ ಮುಂದೆ ಕೂಡ ಬಂದಿದ್ದರು. ಅಧಿಕಾರಿ, ಜನಪ್ರತಿನಿಧಿ ವರ್ಗದ ಗಮನವನ್ನು ನಾವು ಸೆಳೆದಿದ್ದೆವು. ಇಷ್ಟೆಲ್ಲ ಆಗಿದ್ದರೂ ಕೂಡ ಆ ಅನಾಥ ಅಜ್ಜಿಗೆ ಲೋಕಸಭಾ ಚುನಾವಣೆಯಲ್ಲಿ ಓಟು ಮಾಡುವ ಅವಕಾಶ ಸಿಗಲಿಲ್ಲ ಅನ್ನೋದು ವಿಪರ್ಯಾಸ. ಹಿರಿಯ ನಾಗರೀಕರ ಮನೆ ಭಾಗಿಲಿಗೆ ಬಂದು ಓಟು ಪಡೆದುಕೊಳ್ಳುವ ಅವಕಾಶ ಇದೆ.
ಈ ಅವಕಾಶ ಇವರಿಗೆ ಸಿಗಲಿಲ್ಲ. ಇವರನ್ನು ಯಾರೂ ಕೂಡ ಮತಗಟ್ಟೆಗೆ ಕರೆದುಕೊಂಡು ಹೋಗಲಿಲ್ಲ. ಹೀಗಾಗಿ ಇವರು ಮತಮಾಡುವ ಅವಕಾಶವನ್ನು ಕಳೆದುಕೊಂಡರು. ಇವರಿಗೆ ಮಾತ್ರವಲ್ಲ ಇದೇ ಊರಿನ ಹಲವು ಜನ ಹಿರಿಯ ನಾಗರೀಕರು ಮತದಾನ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಇವರು ಓಟು ಹಾಕಲು ಸಾಧ್ಯವಾಗದಿರುವುದರ ಹಿಂದಿರುವ ನಿರ್ಲಕ್ಷ್ಯ ಯಾರದು..? ಈ ಬಗ್ಗೆ ಚುನಾವಣಾಧಿಕಾರಿಗಳು ಯಾವುದೇ ಕ್ರಮವನ್ನು ಏಕೆ ಇದುವರೆಗೆ ತೆಗೆದುಕೊಂಡಿಲ್ಲ ಅನ್ನೋದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.