ನ್ಯೂಸ್ ನಾಟೌಟ್: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ವೈರಲ್ ಪ್ರಕರಣದ ಕುರಿತು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ನಾನಾಗಲಿ, ಹೆಚ್ಡಿ ದೇವೇಗೌಡರಾಗಲಿ ಈ ರೀತಿಯ ಕೆಲಸ ಮಾಡಿಲ್ಲ. ಹೆಣ್ಣುಮಕ್ಕಳ ವಿಚಾರದಲ್ಲಿ ಗೌರವ ಕೊಟ್ಟು ಅವರ ಸಮಸ್ಯೆ ಬಗೆಹರಿಸಿ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಕೇಸ್ ಕುರಿತು ಮಾತನಾಡಿದ ಅವರು, ಈಗಾಗಲೇ ಸಿಎಂ ಎಸ್ಐಟಿ (SIT) ತನಿಖೆಗೆ ಆದೇಶ ನೀಡಿದ್ದಾರೆ ಎಂದು ಗಮನಿಸಿದ್ದೇನೆ. ಹಾಸನ ಚುನಾವಣಾ ಪ್ರಚಾರ ವೇಳೆ ಪ್ರಕರಣ ಆರಂಭವಾಗಿದೆ. ವಾಸ್ತವಾಂಶ ಹೊರಬರಲಿ. ತನಿಖೆ ಆದಮೇಲೆ ಸತ್ಯಾಸತ್ಯತೆ ಹೊರ ಬರಲಿದೆ. ನೆಲದ ಕಾನೂನಲ್ಲಿ ತಪ್ಪು ಮಾಡಿದವನು, ಉಪ್ಪು ತಿಂದವನು ನೀರು ಕುಡಿಯಲೇಬೇಕು. ನಾವು ತಪ್ಪು ಮಾಡಿದವರನ್ನು ಕ್ಷಮಿಸುವುದಿಲ್ಲ. ಹೀಗಾಗಿ ತನಿಖೆ ವರದಿ ಬರಲಿ. ಬಂದ ಮೇಲೆ ಮಾತನಾಡುತ್ತೇನೆ. ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೆ ನನಗೆ ಸಂಬಂಧವಿಲ್ಲ. ಎಸ್ಐಟಿ ತನಿಖೆಗೆ ಆದೇಶಿಸಿದ್ದಾರೆ.
ಎಸ್ಐಟಿ ಅಧಿಕಾರಿಗಳನ್ನು ನೇಮಿಸಿದ್ದಾರೆ. ವಿದೇಶಕ್ಕೆ ಹೋಗಿದ್ದರೆ ಕರೆದುಕೊಂಡು ಬರುವ ಜವಾಬ್ದಾರಿ ಅವರದ್ದು, ನಾನು ಉತ್ತರಿಸಲ್ಲ ಎಂದರು. ಬರ ಪರಿಹಾರ ವಿಚಾರಕ್ಕೆ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಬರ ಪರಿಹಾರ ಕೇಳಿದ್ದು 18,000 ಕೋಟಿ ಅಲ್ಲ. ಸರ್ಕಾರ ಕೇಳಿದ್ದು 4,800 ಕೋಟಿ. ಎನ್ಡಿಆರ್ಎಫ್ ಆ್ಯಕ್ಟ್ ಅಡಿಯಲ್ಲಿ ಇರೋದು ಕೊಟ್ಟರೆ ಸಾಕು ಅಂತ ಕೇಳಿದ್ದರು. ಇದು ಕೇಂದ್ರ ಸರ್ಕಾರದ ಮೇಲೆ ಪದೇ ಪದೇ ಗೂಬೆ ಕೂರಿಸೋ ಯತ್ನ ಮಾಡುತ್ತಿದೆ ಎಂದು ಕಿಡಿಕಾರಿದರು.