ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಲೋಕ ಸಭಾ ಮತ ಚೀಟಿಯಲ್ಲಿ ಹಲವಾರು ಮಂದಿಯ ಹೆಸರನ್ನು ತಪ್ಪಾಗಿ ಮುದ್ರಿಸಲಾಗಿದೆ. ಕೆಲವರ ಮಾನವನ್ನು ಹರಾಜು ಮಾಡುವಷ್ಟರ ಮಟ್ಟಿಗೆ ಕನ್ನಡವನ್ನು ಬಳಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮಾನ ಹಾನಿಯಾದವರು ದೂರು ನೀಡಬೇಕೆನ್ನುವ ಒತ್ತಾಯ ಕೂಡ ಕೇಳಿ ಬಂದಿದೆ.
ಅಬ್ದುಲ್ ಹಾಜಿ ಅನ್ನುವವರ ಹೆಸರನ್ನು ‘ಅಬ್ದುಲ್ ನಾಯಿ’ ಎಂದು ಮತ ಚೀಟಿಯಲ್ಲಿ ಬರೆದಿರುವ ಫೋಟೋ ವೈರಲ್ ಆಗಿತ್ತು. ಇದೀಗ ಪ್ರತ್ಯೇಕ ಮತಗಟ್ಟೆಗಳಲ್ಲಿ ಇಂತಹುದೇ ಇನ್ನೆರಡು ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿದೆ.
ಉಜಿರೆಯ ಮತ ಕೇಂದ್ರ ೯೪ರಲ್ಲಿ ಲಿಲ್ಲಿ ಅನ್ನುವವರ ಹೆಸರನ್ನು ಅಲ್ಲಿ ಅಪಾಯ ಎಂದು ಮತ ಚೀಟಿಯಲ್ಲಿ ಮುದ್ರಿಸಲಾಗಿದೆ. ಮಾತ್ರವಲ್ಲ ವೆಂಕಪ್ಪ ಅನ್ನುವವರ ಹೆಸರನ್ನು ‘ಪಂಕಪ್ಪ’ ಎಂದು ಕೆಟ್ಟದಾಗಿ ಬರೆದು ಮಾನ ಹಾನಿ ಮಾಡಿದ್ದಾರೆ. ಇಂತಹ ಕನ್ನಡವನ್ನು ಬರೆದವರು ಎಲ್ಲಿ ಕಲಿತಿದ್ದಾರೋ ಯಾರಿಂದ ಕಲಿತಿದ್ದಾರೋ ಎಂದು ಈಗ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಸಂತ್ರಸ್ಥರು ಚುನಾವಣಾ ಆಯೋಗಕ್ಕೆ ದೂರು ನೀಡಬೇಕೆನ್ನುವ ಒತ್ತಾಯಗಳು ಕೂಡ ಕೇಳಿ ಬರುತ್ತಿದೆ. ಮುಂದಿನ ಚುನಾವಣೆಯಲ್ಲಾದರೂ ಇಂತಹ ಅಸಹ್ಯ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಮಾತ್ರವಲ್ಲ ಈ ರೀತಿ ಕಣ್ ಮುಚ್ಚಿಕೊಂಡು ಬರೆಯುವವರ ಮೇಲೆ ಬಿಗಿ ಕ್ರಮವನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.