ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 26 ರಂದು ಮತದಾನಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಒಂದಷ್ಟು ಬಿಗಿ ಭದ್ರತಾ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರುವುದು ವಿಶೇಷ. ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲರ ಹಾವಳಿ ಹೆಚ್ಚಾಗಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ 18 ನಕ್ಸಲ್ ಪೀಡಿತ ಪ್ರದೇಶವನ್ನ ಗುರುತಿಸಿದೆ. ಈ ಬಗ್ಗೆ ಸ್ವತಃ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಪೊಲೀಸ್ ಕಮೀಷನರ್ ಅನುಪಮ್ ಅಗರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಎಸ್ಪಿ ರಿಷ್ಯಂತ್ ಸಿ.ಬಿ ನಕ್ಸಲ್ ಪೀಡಿತ ಪ್ರದೇಶದ ಮತಗಟ್ಟೆಗಳಿಗೆ ಸಿಎಪಿಎಫ್ ಪಡೆಯನ್ನು ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆಯೊಂದಿಗೆ ನಕ್ಸಲ್ ನಿಗ್ರಹ ಪಡೆ ಕಣ್ಗಾವಲಿಗೆ ಇರಲಿದೆ. ನಕ್ಸಲ್ ನಿಗ್ರಹ ಪಡೆ ಈಗಾಗಲೆ ಕಾಡಿನಲ್ಲಿ ಕೂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದೆ. ಮತದಾರರು ಯಾವುದೇ ಆತಂಕ ಇಲ್ಲದೆ, ಅನುಮಾನ ಇಲ್ಲದೆ ಮತದಾನ ಮಾಡಿ ಎಂದು ಹೇಳಿದರು.
ಏನೇ ಸಮಸ್ಯೆ ಆದರೂ ನಮಗೆ ತಿಳಿಸಿ. ನೈತಿಕ ಪೊಲೀಸ್ ಗಿರಿ ನಡೆಸುವುದು, ಅಡ್ಡಗಟ್ಟುವುದು ಮಾಡಿದರೆ ಸಹಿಸಲ್ಲ. ಅಂತವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ. 1600 ಪೊಲೀಸ್ ಸಿಬ್ಬಂದಿಗಳನ್ನು ಮತಗಟ್ಟೆಯಲ್ಲಿ ನಿಯೋಜನೆ ಮಾಡಲಾಗಿದೆ. ಸಿ.ಎ.ಪಿಎಫ್, ಕೆ.ಎಸ್.ಆರ್.ಪಿ, 560 ಹೋಮ್ ಗಾರ್ಡ್, ಎ.ಎನ್.ಎಫ್, ಫಾರೆಸ್ಟ್ ಗಾರ್ಡ್ಸ್ ಭದ್ರತೆಗೆ ಇರುತ್ತಾರೆ ಎಂದು ತಿಳಿಸಿದರು.