ನ್ಯೂಸ್ ನಾಟೌಟ್: ತನ್ನ ಸ್ನೇಹಿತನಿಂದ ಕೊಲೆಯಾದ ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಚಿವ ಎಚ್ಕೆ ಪಾಟೀಲ್ ಮಂಗಳವಾರ ಭೇಟಿ ನೀಡಿ ನೇಹಾ ತಂದೆ ನಿರಂಜನ ಹಿರೇಮಠ ಹಾಗೂ ತಾಯಿ ಗೀತಾ ಗೆ ಸಾಂತ್ವನ ಹೇಳಿದರು ಮತ್ತು ಈ ವೇಳೆ ಸಿಎಂ ಸಿದ್ದರಾಮಯ್ಯ ನೇಹಾ ತಂದೆ ಜೊತೆ ಫೋನ್ ನಲ್ಲಿ ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಕರಣದ ತನಿಖೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದ್ದು, ಶೀಘ್ರ ನ್ಯಾಯ ಕೊಡಿಸುವುದಾಗಿ ಸಚಿವರು ಧೈರ್ಯ ಹೇಳಿದರು ಎನ್ನಲಾಗಿದೆ. ನಂತರ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮದೇ ಫೋನ್ನಲ್ಲಿ ಕರೆ ಮಾಡಿ, ನಿರಂಜನ ಹಿರೇಮಠಗೆ ನೀಡಿದರು. ನಿರಂಜನ ಹಿರೇಮಠ ಅವರ ಜೊತೆ ಫೋನ್ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ವೆರಿ ಸಾರಿ’ ಎಂದು ಕ್ಷಮೆ ಕೇಳಿದರು. ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ನಿರಂಜನ ಹಿರೇಮಠ ಅವರು, “ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿದ್ದಕ್ಕೆ ಸಮಾಧಾನ ಇದೆ. ವಿಶೇಷ ನ್ಯಾಯಾಲಯ ಸ್ಥಾಪಿಸಿದ್ದಕ್ಕೂ ಸಮಾಧಾನ ಇದೆ. ನಿಮಗೆ ಧನ್ಯವಾದ,” ಎಂದು ಹೇಳಿದರು.
ನಂತರ ಮಾತನಾಡಿದ ನಿರಂಜನ ಹಿರೇಮಠ ಅವರು, ಪ್ರಕರಣದಲ್ಲಿ ಸರ್ಕಾರ ತಕ್ಷಣ ಸ್ಪಂದಿಸಿದೆ. ಆದರೆ, ಮಾಹಿತಿ ಕೊರತೆಯಿಂದ ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟಿದ್ದೇವೆ. ವಿಶೇಷ ನ್ಯಾಯಾಲಯ ಸ್ಥಾಪನೆ ಬಗ್ಗೆ ಸಚಿವರು ಹೇಳಿದ್ದಾರೆ. ಸ್ಥಳೀಯ ಶಾಸಕರು, ಜಿಲ್ಲಾಧ್ಯಕ್ಷರು ಎಲ್ಲ ಮುಖಂಡರು ನಮ್ಮ ಪರ ನಿಂತಿದ್ದಾರೆ ಎಂದರು ಹೇಳಿದರು. ವಿಶೇಷ ನ್ಯಾಯಾಲಯ ಸ್ಥಾಪನೆ ನಿರ್ಣಾಯಕ್ಕೆ ಸರ್ಕಾರಕ್ಕೆ ಧನ್ಯವಾದ ಹೇಳ್ತೇನೆ. ಕಾನೂನಿನ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಬೆನ್ನ ಹಿಂದೆ ಸರ್ಕಾರ ಕೆಲಸ ಮಾಡಿದೆ. ಸಿಎಂ ಸಾಂತ್ವನ ಹೇಳಲು ಬರುವುದಾಗಿ ಹೇಳಿದ್ದಾರೆ. ನೇಹಾಳ ಸಾವಿಗೆ ನ್ಯಾಯ ಸಿಗಬೇಕು. ಈಗ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ. ಅವರು ಹೇಗೆ ತನಿಖೆ ಮಾಡ್ತಾರೋ ಮೊದಲು ಮಾಡಲಿ. ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ಮಾಡ್ತಿಲ್ಲ ಅಂತ ಆರೋಪ ಮಾಡಿದ್ದೆ. ನಿಷ್ಪಕ್ಷವಾಗಿ ತನಿಖೆ ನಡೆದಿರುವುದು ನನಗೆ ಗೊತ್ತಾಗಿದೆ. ಆದರೆ, ಮಾಹಿತಿ ಕೊರತೆಯಿಂದಷ್ಟೆ ನಾನು ಹಿಂದೆ ಮಾತನಾಡಿದ್ದೆ. ಈ ಬಗ್ಗೆ ಪೊಲೀಸ್ ಇಲಾಖೆಯ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು ಈ ವೇಳೆ ಸಿಎಂ ಶೀಘ್ರ ಶಿಕ್ಷೆಯ ಭರವಸೆ ನೀಡಿದರು ಎನ್ನಲಾಗಿದೆ.