ನ್ಯೂಸ್ ನಾಟೌಟ್: ಮದುವೆ ಸಮಾರಂಭದಲ್ಲಿ ವಧುವನ್ನು ಆಕೆಯ ಮನೆಯವರೇ ಅಪಹರಣ ಮಾಡಿ ಮಂಟಪದಿಂದ ಎಳೆದೊಯ್ಯಲು ಯತ್ನಿಸಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಡಿಯಂನಲ್ಲಿ ನಡೆದಿದೆ. ಗಂಗವರಂ ಸ್ನೇಹಾ ಮತ್ತು ಬತ್ತಿನ ವೆಂಕಟಾನಂದು ನರಸರಾವ್ಪೇಟೆ ಜಿಲ್ಲೆಯ ಕಾಲೇಜೊಂದರಲ್ಲಿ ಪಶುವೈದ್ಯಕೀಯ ವಿಜ್ಞಾನದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಚಯಸ್ಥರಾಗಿ ಪರಸ್ಪರ ಪ್ರೀತಿಸಲು ಶುರು ಮಾಡಿದ್ದಾರೆ.
ಏಪ್ರಿಲ್ 13 ರಂದು ವಿಜಯವಾಡದ ಪ್ರಸಿದ್ಧ ದುರ್ಗಾ ದೇವಸ್ಥಾನದಲ್ಲಿ ಇಬ್ಬರು ವಿವಾಹವಾಗಿದ್ದಾರೆ. ಮದುವೆ ಬಳಿಕ ಗಂಡನ ಮನೆಯವರು ಎಲ್ಲರನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿ ಆರತಕ್ಷತೆ ರೀತಿಯ ಸಮಾರಂಭವನ್ನು ಆಯೋಜಿಸಲು ನಿರ್ಧರಿಸಿದ್ದು, ಇದಕ್ಕೆ ಸ್ನೇಹಾಳ ಮನೆಯವರನ್ನು ಕರೆಯಲಾಗಿತ್ತು. ಸ್ನೇಹಾ ವಧುವಿನಂತೆ ಶೃಂಗಾರಗೊಂಡು ಮಂಟಪದಲ್ಲಿ ಕೂತಿದ್ದಳು. ಈ ವೇಳೆ ಸ್ನೇಹಾಳ ಮನೆಯವರು ಬಂದು ಆಕೆಯನ್ನು ಬರುವಂತೆ ಹೇಳಿದ್ದಾರೆ.
ಸ್ನೇಹಾಳ ತಾಯಿ ಪದ್ಮಾವತಿ ಸಂಬಂಧಿಕರಾದ ಚರಣ್ ಕುಮಾರ್, ಚಂದು ಮತ್ತು ನಕ್ಕ ಭರತ್ ಎಂಬುವರು ಸ್ನೇಹಾಳನ್ನು ಬಲವಂತವಾಗಿ ಎಳೆದುಕೊಂಡು ಹೋಗಲು ಯತ್ನಿಸಿದ್ದಾರೆ. ಇದ್ದಕ್ಕಿದ್ದಂತೆ ರಾದ್ಧಾಂತ ನೋಡಿ ಗಂಡಿನ ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಬರುವುದಿಲ್ಲ ಎಂದು ಅಂಗಲಾಚಿದರೂ ಸ್ನೇಹಾಳನ್ನು ಬಲವಂತವಾಗಿ ಆಕೆಯ ಮನೆಯವರು ಎತ್ತಿಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಗಂಡಿನ ಮನೆಯವರು ಅಡ್ಡ ಬಂದಿದ್ದು, ಅವರ ಮೇಲೆ ಸ್ನೇಹಾಳ ಮನೆಯವರು ಮೆಣಸಿನ ಪುಡಿಯನ್ನು ಎಸೆದು ಗಲಾಟೆ ಮಾಡಿದ್ದಾರೆ.
ಕೊನೆಗೂ ವರ ಆತನ ಕುಟುಂಬದವರು ಮತ್ತು ಆತನ ಅಪಹರಣ ಯತ್ನವನ್ನು ವಿಫಲಗೊಳಿಸಿದ್ದಾರೆ. ವರನ ಸಂಬಂಧಿಕರಲ್ಲಿ ಒಬ್ಬರಾದ ವೀರಬಾಬು ಎನ್ನುವವರಿಗೆ ಘಟನೆಯಲ್ಲಿ ಗಂಭೀರವಾಗಿ ಗಾ* ಯಗಳಾಗಿದೆ. ಅವರನ್ನು ರಾಜಮಹೇಂದ್ರವರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಸ್ನೇಹಾಳ ಕುಟುಂಬಸ್ಥರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.