ಮಡಿಕೇರಿ: ಒಂದು ಕಡೆ ದೇಶದ ಎಲ್ಲೆಡೆ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮ. ಈ ಆಚರಣೆಯಲ್ಲಿ ದೇಶದ ಜನ ಸಂಭ್ರಮಿಸುತ್ತಿದ್ದರೆ ಮತ್ತೊಂದು ಕಡೆ ಯೋಧರ ನೆಲೆಬೀಡು ಕೊಡಗಿನಲ್ಲಿಯೇ ಯೋಧ ಹಾಗೂ ಆತನ ಕುಟುಂಬದ ಮೇಲೆ ನಡು ರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆದ ಘಟನೆ ಸೋಮವಾರ ಸಂಜೆ ನಡೆದಿದೆ.
ಏನಿದು ಘಟನೆ?
ಆತ ಇನ್ನೂ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗಿನ ಯೋಧ. ಹೆಸರು ಅಶೋಕ್. ಆತನ ಪತ್ನಿ ಯೋಗಿತಾ. ತಂದೆ ಪೊನ್ನಪ್ಪ, ತಾಯಿ ರಾಧಾ ಹಾಗೂ ಸಹೋದರ ಚೇತನ್ ಕುಶಾಲನಗರದಿಂದ ಮಡಿಕೇರಿಗೆ ಸೋಮವಾರ ಸಂಜೆ ಕಾರಿನಲ್ಲಿ ಬರುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಕಾರೊಂದು ಯೋಧನ ಕುಟುಂಬ ಪ್ರಯಾಣಿಸುತ್ತಿದ್ದ ಕಾರಿಗೆ ಮಡಿಕೇರಿಯ ಬೋಯಿಕೇರಿ ಎಂಬಲ್ಲಿ ಡಿಕ್ಕಿ ಹೊಡೆದಿದೆ. ಹಿಂದಿನ ಸೀಟಿನಲ್ಲಿ ಸಣ್ಣ ಮಗು ಇದೆ. ವಯಸ್ಸಾದ ತಂದೆ-ತಾಯಿ ಕುಟುಂಬವಿದೆ. ಈ ರೀತಿ ಅಜಾಗರೂಕತೆಯಿಂದ ಗಾಡಿ ಓಡಿಸುತ್ತಿರುವುದು ಎಷ್ಟು ಸರಿ ಎಂದು ಅಶೋಕ್ ಗುದ್ದಿದ ಕಾರಿನ ಚಾಲಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದೇ ವೇಳೆ ತಪ್ಪಿತಸ್ಥ ಕಾರಿನ ಚಾಲಕ ಫೋನ್ ಮಾಡಿ ಒಂದಷ್ಟು ಗೊಂಡಾಗಳನ್ನು ಕರೆಯಿಸಿಕೊಂಡು ಅಶೋಕ್ ಮತ್ತು ಅವರ ಕುಟುಂಬದ ಮೇಲೆ ತೀವ್ರ ಹಲ್ಲೆ ಮಾಡುತ್ತಾರೆ. ಮಾತ್ರವಲ್ಲ ಅಶೋಕ್ ಪತ್ನಿ ಯೋಗಿತಾ ಅವರ ಮಾಂಗಲ್ಯ ಸರ ಸೇರಿದಂತೆ ಚಿನ್ನಾಭರಣವನ್ನು ದುಷ್ಕರ್ಮಿಗಳು ದೋಚಿದ್ದಾರೆ.
ನಾಲ್ವರ ಬಂಧನ
ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಯೋಧನ ಪತ್ನಿ ಯೋಗಿತಾ, ‘ಹೆಣ್ಣು ಮಕ್ಕಳು, ವಯಸ್ಸಾದವರೂ ಎನ್ನುವುದನ್ನು ಸ್ವಲ್ಪವೂ ಯೋಚಿಸದೇ ಹಲ್ಲೆ ಮಾಡಿದರು. ನನ್ನ ಗಂಡ, ಭಾವನಿಗೆ ಮಾರಣಾಂತಿಕ ಥಳಿಸಿದ್ದಾರೆ. ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಉಳಿದವರನ್ನೂ ಕೂಡಲೇ ಬಂಧಿಸಿ ನ್ಯಾಯ ಒದಗಿಸಿಕೊಡಬೇಕು’ ಎಂದು ಒತ್ತಾಯಿಸಿದರು