ನ್ಯೂಸ್ ನಾಟೌಟ್: ವಯನಾಡಿನ ಹಾಲಿ ಸಂಸದ ರಾಹುಲ್ ಗಾಂಧಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇತ್ತ ಸಿಪಿಎಂ ಹಾಗೂ ಬಿಜೆಪಿ ಕೂಡ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ತೀವ್ರಿ ಜಿದ್ದಾಜಿದ್ದಿನ ಕಣವಾಗಿರುವ ವಯನಾಡಿನಲ್ಲಿ ಇದೀಗ ಕಾಂಗ್ರೆಸ್ ಗೆ ಶಾಕ್ ಎದುರಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ವಯನಾಡು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿಎಂ ಸುಧಾಕರನ್ ಬಿಜೆಪಿ ಸೇರಿಕೊಂಡಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಪಿಎಂ ಸುಧಾಕರನ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ನನಗೆ ರಾಹುಲ್ ಗಾಂಧಿ ಸಿಗುತ್ತಿಲ್ಲ. ವಯನಾಡು ಕಾಂಗ್ರೆಸ್ನ ಹಲವು ಮುಖಂಡರಿಗೆ ರಾಹುಲ್ ಗಾಂಧಿಯನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಹೀಗಿರುವಾಗ ಜನಸಾಮಾನ್ಯರಿಗೆ ರಾಹುಲ್ ಗಾಂಧಿ ಸಿಗುತ್ತಾರಾ? ಎಂದು ಪಿಎಂ ಸುಧಾಕರನ್ ಪ್ರಶ್ನಿಸಿದ್ದಾರೆ. ಸದ್ಯದ ಸಮಾಜಕ್ಕೆ ಬಿಜೆಪಿ ಪಕ್ಷದ ಅವಶ್ಯಕತೆ ಇದೆ. ಪ್ರಧಾನಿ ಮೋದಿಯ ಅಭಿವೃದ್ಧಿ ಯೋಜನೆಗಳು ಕೇರಳಕ್ಕೆ ಬೇಕಾಗಿದೆ.
ಕೇಂದ್ರದ ಅಭಿವೃದ್ಧಿ ಯೋಜನೆಗಳು ಕೇರಳದಲ್ಲಿ ಅನುಷ್ಠಾನಕ್ಕೆ ಬರಲು ಇಲ್ಲಿಂದ ಸಂಸದರನ್ನು ನಾವು ಕಳುಹಿಸಬೇಕಿದೆ. ವಯನಾಡಿನಿಂದ ಕೆ ಸುರೇಂದ್ರನ್ ಅವರನ್ನು ಗೆಲ್ಲಿಸಬೇಕು ಎಂದು ವಯನಾಡು ಮತದಾರರಲ್ಲಿ ಪಿಎಂ ಸುಧಾಕರನ್ ಮನವಿ ಮಾಡಿದ್ದಾರೆ. ಏಪ್ರಿಲ್ 26ರಂದು ಕೇರಳದಲ್ಲಿ ಚುನಾವಣೆ ನಡೆಯಲಿದೆ. ಒಂದು ಹಂತದಲ್ಲಿ ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಕೇರಳದಲ್ಲಿ ಬಿಜೆಪಿ ಇನ್ನೂ ನೆಲೆ ಕಂಡುಕೊಂಡಿಲ್ಲ.