ಚೆನ್ನೈ: ದೇಶ ಸೇವೆ ಮಾಡಬೇಕು ಅನ್ನುವುದು ಪ್ರತಿಯೊಬ್ಬ ಯುವಕರ ಕನಸು. ಆದರೆ ಇಲ್ಲೊಬ್ಬ ಯುವಕ ಈಗ ಪರದೇಶ ಸೇವೆ ಮಾಡಿ ಸುದ್ದಿಯಾಗಿದ್ದಾನೆ. ಹೌದು ಭಾರತೀಯ ಸೇನೆಯಲ್ಲಿ ಅವಕಾಶ ಸಿಗಲಿಲ್ಲ ಎಂಬ ನಿರಾಶೆಯಲ್ಲಿದ್ದ ಈ ಯುವಕ ಈಗ ಉಕ್ರೇನ್ ಸೈನ್ಯವನ್ನು ಸೇರಿಕೊಂಡಿರುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.
ತಮಿಳುನಾಡಿನ ವಿದ್ಯಾರ್ಥಿಯೊಬ್ಬ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಸೇನೆಯನ್ನು ಸೇರಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕೊಯಮತ್ತೂರು ಜಿಲ್ಲೆಯ 21 ವರ್ಷದ ವಿದ್ಯಾರ್ಥಿ ಸೈನಿಕೇಶ್ ರವಿಚಂದ್ರನ್ ಅವರು, ಉಕ್ರೇನ್ ನ ಪ್ಯಾರಾ ಮಿಲಿಟರಿ ಪಡೆ ಸೇರಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
2018ರಲ್ಲಿ ಸೈನಿಕೇಶ್ ಹಾರ್ಕಿವ್ ನ ನ್ಯಾಶನಲ್ ಏರೊಸ್ಪೇಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ತೆರಳಿದ್ದರು. ಈ ವರ್ಷದ ಜುಲೈಗೆ ಅವರು ವಿದ್ಯಾಭ್ಯಾಸ ಪೂರ್ಣಗೊಳ್ಳುತ್ತಿತ್ತು. ಉಕ್ರೇನ್ ಮತ್ತು ರಷ್ಯಾ ಸಂಘರ್ಷ ತೀವ್ರಗೊಂಡಿದ್ದು, ಪೋಷಕರು ಸೈನಿಕೇಶ್ ಜೊತೆಗಿನ ಸಂಪರ್ಕ ಕಳೆದುಕೊಂಡಿದ್ದಾರೆ. ಹೀಗಾಗಿ, ಪೋಷಕರು ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಬಳಿಕ, ಅಧಿಕಾರಿಗಳು ವಿದ್ಯಾರ್ಥಿಯನ್ನು ಸಂಪರ್ಕಿಸಿದಾಗ, ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ನ ಪ್ಯಾರಾಮಿಲಿಟರಿ ಪಡೆ ಸೇರಿರುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಅಧಿಕಾರಿಗಳು ವಿದ್ಯಾರ್ಥಿಯ ಪೋಷಕರ ಬಳಿ ಮಾತನಾಡಿದಾಗ ಆತ ಭಾರತೀಯ ಸೇನೆ ಸೇರಲು ಅರ್ಜಿ ಸಲ್ಲಿಸಿದ್ದು, ಅದು ತಿರಸ್ಕೃತಗೊಂಡಿದ್ದ ಬಗ್ಗೆ ತಿಳಿದುಬಂದಿದೆ.