ನ್ಯೂಸ್ ನಾಟೌಟ್: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ, ಮೋಸ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಶನಿವಾರ(ಎ.20) ವಿನೂತನ ಪ್ರತಿಭಟನೆ ನಡೆಸಿತು.
ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲ ನೇತೃತ್ವದಲ್ಲಿ ‘ಚೊಂಬು ಹಿಡಿದು’ ಕೇಂದ್ರದಿಂದ ರಾಜ್ಯಕ್ಕೆ ಸಿಕ್ಕಿದ್ದು ಕೇವಲ ಖಾಲಿ ಚೊಂಬು ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಶಾಸಕ ಅರ್ಷದ್ ರಿಜ್ವಾನ್ ಸೇರಿದಂತೆ ಪಕ್ಷದ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸುರ್ಜಿವಾಲ, ಮೋದಿ ಮತ್ತು ಬಿಜೆಪಿಯವರು ಕರುನಾಡಿನ ಜನತೆಗೆ ಬಿಜೆಪಿ ಸರ್ಕಾರ ಚೊಂಬು ಕೊಟ್ಟಿದ್ದಾರೆ. ಬರ ಪರಿಹಾರ ವಿಚಾರದಲ್ಲಿ 18 ಸಾವಿರ ಕೋಟಿ, 15ನೇ ಹಣಕಾಸು ಆಯೋಗದಿಂದ ನೀಡಬೇಕಿದ 62 ಸಾವಿರ ಕೋಟಿ ರೂ. ಚೊಂಬು ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಹೇಳಿ ಮೋಸ ಮಾಡಿದ ಬಿಜೆಪಿ ಸರ್ಕಾರ ,ರೈತರ ಆದಾಯ ದ್ವಿಗುಣಗೊಳಿಸಲಿಲ್ಲ, ನಾವು ಕಟ್ಟುವ ಪ್ರತಿ 100 ರೂ. ತೆರಿಗೆಯಲ್ಲಿ 13 ರೂ. ಮಾತ್ರ ವಾಪಸ್ ನೀಡುವ ಮೂಲಕ ಚೊಂಬು ನೀಡಿದೆ. ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ 27 ಜನ ಲೋಕಸಭಾ ಸದಸ್ಯರು ರಾಜ್ಯಕ್ಕೆ ನೀಡಿದ್ದು ಚೊಂಬು. ಇಷ್ಟೆಲ್ಲಾ ಚೊಂಬುಗಳನ್ನು ನೀಡಿರುವ ಬಿಜೆಪಿ ಪಕ್ಷಕ್ಕೆ ಈ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 6.5ಕೋಟಿ ಕನ್ನಡಿಗರ ಸಹ ಅದೇ ಚೊಂಬನ್ನು ನೀಡಿ ಮನೆಗೆ ಕಳುಹಿಸಿಲಿದ್ದಾರೆ ಎಂದರು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಪಕ್ಷದ ಪರವಾಗಿ ಪ್ರಚಾರ ಮಾಡಲು ಪ್ರಧಾನಿಗೆ ಎಲ್ಲ ಹಕ್ಕಿದೆ. ಅದೇ ಸಮಯದಲ್ಲಿ ನಮ್ಮ ತೆರಿಗೆ, ಹಕ್ಕು, ಬರ ಪರಿಹಾರ ನೀಡದಿರುವ ಬಗ್ಗೆ ಹೇಳಿಕೆ ನೀಡಬೇಕಾಗಿದೆ. ಭದ್ರಾ ನೀರಿನ ಯೋಜನೆಗೆ ಬಜೆಟ್ನಲ್ಲಿ ಮೀಸಲಿಡಬೇಕಾದ ಹಣವನ್ನು ಏಕೆ ನೀಡಲಿಲ್ಲ? ಏನೇ ವಿವಾದಗಳಿದ್ದರೂ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.