ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಪರ ಮತಯಾಚನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ(Chikballapura) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹಾಗೂ ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬುರವರ ಪರ ಚುನಾವಣಾ ಪ್ರಚಾರ ನಡೆಸಲು ಇಂದು (ಏ.20) ಮಧ್ಯಾಹ್ನ 3.30 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಚಿಕ್ಕಬಳ್ಳಾಪುರ ಆಗಮಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಮೋದಿಯ ಕಾರ್ಯಕ್ರಮದ ಪ್ರಯುಕ್ತ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ಸುಮಾರು 50 ಎಕರೆ ಜಮೀನಿನಲ್ಲಿ ವಿಶಾಲವಾದ ಪೆಂಡಲ್ ಹಾಗೂ ಹೆಲಿಪ್ಯಾಡ್ಗಳ ನಿರ್ಮಾಣ ಮಾಡಲಾಗಿದೆ. ಇನ್ನು ಆರ್ಆರ್ಆರ್ ಚಲನಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದ ಸ್ಥಳದಲ್ಲೇ ಮೋದಿಯವರ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಸುಮಾರು 50 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 30ಕ್ಕೂ ಹೆಚ್ಚು ಶೌಚಾಲಯ, ಬೃಹತ್ ಎಲ್ಇಡಿ ಪರದೆಗಳು, ಪೆಂಡಲ್, ಪಾರ್ಕಿಂಗ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಕೇಂದ್ರವಲಯ ಐಜಿಪಿಯವರ ನೇತೃತ್ವದಲ್ಲಿ ಎಸ್ಪಿ, ಎಎಸ್ಪಿ ಸೇರಿದಂತೆ ಭದ್ರತೆಗಾಗಿ 450 ಪೊಲೀಸರಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ವೇದಿಕೆಯ ಹಿಂಭಾಗ ನಿರ್ಮಾಣ ಮಾಡಿರುವ ಹೆಲಿಪ್ಯಾಡ್ನಲ್ಲಿ ಲ್ಯಾಂಡ್ ಆಗಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿನ ಅರಮನೆ ಮೈದಾನಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.