ಬೆಂಗಳೂರು: ಜೀವನ್ ಭಿಮಾನಗರ ಠಾಣೆ ವ್ಯಾಪ್ತಿಯ ಅಮರಜ್ಯೋತಿ ನಗರದ ಪೇಯಿಂಗ್ ಗೆಸ್ಟ್ ಕಟ್ಟಡವೊಂದರ ಐದನೇ ಮಹಡಿಯಿಂದ ಜಿಗಿದು ಬಿ.ಕಾಂ ವಿದ್ಯಾರ್ಥಿನಿ ಭವ್ಯ (19) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಮುಳಬಾಗಿಲಿನ ಭವ್ಯ ಅವರು ಕೋರಮಂಗಲದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪರೀಕ್ಷೆಯಲ್ಲಿ ನಕಲು ಮಾಡಿದರೆಂಬ ಕಾರಣಕ್ಕೆ ಅವರನ್ನು ಶಿಕ್ಷಕರು ತರಾಟೆಗೆ ತೆಗೆದುಕೊಂಡಿದ್ದರು. ಡಿಬಾರ್ ಸಹ ಮಾಡಿದ್ದರೆಂಬ ಮಾಹಿತಿ ಇದೆ. ಇದರಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು
‘ನನ್ನನ್ನು ಪರೀಕ್ಷೆಯಿಂದ ಡಿಬಾರ್ ಮಾಡಿದ್ದಾರೆ. ನಾನು ಬದುಕಲ್ಲ, ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ’ ಎಂಬುದಾಗಿ ಉಲ್ಲೇಖಿಸಿರುವ ಮರಣಪತ್ರ ವಿದ್ಯಾರ್ಥಿನಿ ಕೊಠಡಿಯಲ್ಲಿ ಸಿಕ್ಕಿದೆ. ಅದರ ಪರಿಶೀಲನೆ ನಡೆಸಲಾಗುತ್ತಿದೆ.’ ‘ಪೋಷಕರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.