ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಇಂದು (ಶುಕ್ರವಾರ) ಆರಂಭವಾಗಿದೆ. ಒಟ್ಟು 102 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ ಜನತೆ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6ಕ್ಕೆ ಮುಕ್ತಾಯವಾಗಲಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ 1,652 ಅಭ್ಯರ್ಥಿಗಳಿದ್ದು. ಇಂದು 16.63 ಕೋಟಿ ಜನರು ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ಮೊದಲ ಹಂತದಲ್ಲಿ 1.87 ಲಕ್ಷ ಮತಗಟ್ಟೆಗಳಲ್ಲಿ ಮತದಾನ ಮುಂದುವರಿಯಲಿದೆ.
ತಮಿಳುನಾಡಿನ – 39, ರಾಜಸ್ಥಾನದ 12, ಉತ್ತರ ಪ್ರದೇಶದ 8, ಮಧ್ಯಪ್ರದೇಶ 6, ಉತ್ತರಾಖಂಡ 5, ಮಹಾರಾಷ್ಟ್ರ 5, ಅಸ್ಸಾಂನ 5, ಬಿಹಾರದ 4 , ಪ. ಬಂಗಾಳದ 3, ಮಣಿಪುರ 2, ಅರುಣಾಚಲ ಪ್ರದೇಶ 2 , ಮೇಘಾಲಯ 2, ಪುದುಚೆರಿ, ಛತ್ತೀಸ್ಘಡ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದಲ್ಲಿ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಚುನಾವಣೆ ಸುಗಮವಾಗಿ ನಡೆಸಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಪಡೆಗಳೊಂದಿಗೆ ಮತದಾನ ಕೇಂದ್ರಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಅರ್ಧಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ಮತ್ತು ಮೈಕ್ರೋ ಅಬ್ಸರ್ವರ್ಗಳ ವ್ಯವಸ್ಥೆ ಮಾಡಲಾಗಿದೆ.