ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆಗೆ ದಿನಗಣನೆ ನಡೆಯುತ್ತಿದ್ದಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಬಿರುಸು ಪಡೆದುಕೊಂಡಿದೆ. ಈ ಪ್ರಚಾರ ಬಿರುಸಾದ ಬೆನ್ನಲ್ಲೇ ಬಿಜೆಪಿ -ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ಒಬ್ಬರಿಗೊಬ್ಬರು ಮಾತಿನ ಸಮರ ನಡೆಸಿದ್ದಾರೆ. ಮಾತ್ರವಲ್ಲ ಒಂದು ಹೆಜ್ಜೆ ಮುಂದೆ ಹೋಗಿ ಹೊಡೆದಾಟಕ್ಕೂ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ರಾಮ ನವಮಿ ಉತ್ಸವ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಉರ್ವ ಚಿಲಿಂಬಿ ಸಮೀಪ ಇರುವ ಸಾಯಿಮಂದಿರದ ಎದುರು ಪ್ರಚಾರ ಆರಂಭಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಂದಿರದ ಟ್ರಸ್ಟಿ ವಿಶ್ವಾಸ್ ದಾಸ್, ಮಂದಿರದ ಬಳಿ ರಾಜಕೀಯ ಪ್ರಚಾರ ನಡೆಸಬೇಡಿ. ಇಲ್ಲಿ ಪ್ರಚಾರ ನಡೆಸಲು ಯಾವುದೇ ಪಕ್ಷಕ್ಕೆ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ಬಿಜೆಪಿ ಶಾಸಕ ಟ್ರಸ್ಟಿಯನ್ನು ನಿಂದಿಸಿದ್ದಾರೆ ಎನ್ನಲಾಗಿದೆ.
ಈ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರರ್ತರನ್ನು ಪ್ರಶ್ನಿಸಿದ್ದಾರೆ. ಬಳಿಕ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ತಾರಕಕ್ಕೇರಿ ಹೊಡೆದಾಟಕ್ಕೆ ಮುಂದಾಗುತ್ತಿದ್ದಂತೆ ಸುದ್ದಿ ತಿಳಿದು ಆಗಮಿಸಿದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.