ನ್ಯೂಸ್ ನಾಟೌಟ್: ‘ನಾರಾಯಣ ಗುರು ವೃತ್ತ ನಿರ್ಮಾಣಕ್ಕೆ ಇದ್ದ ವಿರೋಧ ಲೆಕ್ಕಿಸದೇ ನಾವು ಹೋರಾಡಿದ್ದು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮಕ್ಕೆ ನಮ್ಮನ್ನು ಬನ್ನಿ ಎಂದೂ ಕರೆದಿಲ್ಲ. ಇದರಿಂದ ಮನಸ್ಸಿಗೆ ಬೇಸರವಾಗಿದೆ’ ಎಂದು ‘ಬಿರುವೆರ್ ಕುಡ್ಲ’ ಸಂಘಟನೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಹೇಳಿದ್ದಾರೆ.
ವೃತ್ತಕ್ಕಾಗಿ ಹೋರಾಡಿದ್ದು ನಾವೇ
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ವೃತ್ತ ನಿರ್ಮಾಣಕ್ಕೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಮೂರು ಸಲ ಸಲ್ಲಿಸಿದ್ದ ಮನವಿಗಳೂ ತಿರಸ್ಕೃತಗೊಂಡಿದ್ದವು. ಬಿಜೆಪಿ ನೇತೃತ್ವದ ಸರ್ಕಾರವೂ ವೃತ್ತ ನಿರ್ಮಿಸದಿದ್ದಾಗ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಹಾಗೂ ಬಿಜೆಪಿಯ ಇತರ ಶಾಸಕರಿಗೆ 200ಕ್ಕೂ ಹೆಚ್ಚು ಬಿಲ್ಲವ ಸಂಘಗಳು ಮನವಿ ಸಲ್ಲಿಸಿವೆ. ಈ ವೃತ್ತಕ್ಕಾಗಿ ಹೋರಾಡಿದ ನಾವೇ ಈಗ ಅವರಿಗೆ ಬೇಡವಾದೆವು. ತೊಂದರೆ ಇಲ್ಲ. ದೇವರು ನೋಡಿಕೊಳ್ಳುತ್ತಾರೆ’ ಎಂದು ನೋವಿನಿಂದ ನುಡಿದರು.
ಒಬ್ಬರನ್ನಾದರೂ ಆಹ್ವಾನಿಸಬಹುದಿತ್ತು
ನಮ್ಮನ್ನು ಕರೆಯಲಿಲ್ಲ ಎಂಬುದಷ್ಟೇ ನಮಗೆ ಬೇಸರ. ಬಿಲ್ಲವರು ಆರಾಧನೆ ಮಾಡುವುದು ಕುದ್ರೋಳಿ ಕ್ಷೇತ್ರವನ್ನು. ಅಲ್ಲಿನ ಅಧ್ಯಕ್ಷ ಸಾಯಿರಾಂ ಅವರನ್ನಾದರೂ ಆಹ್ವಾನಿಸಿದ್ದರೂ ಸಾಕಿತ್ತು. ನಮ್ಮ ಸಮುದಾಯದವರಿಗೂ ಈ ಬಗ್ಗೆ ತುಂಬಾ ಬೇಸರವಿದೆ’ ಎಂದರು. ‘ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಸಂಘದ ಮುಖಂಡರು ಅಥವಾ ಪಕ್ಷದವರು ಹೋಗಿದ್ದರೆ ಬೇಸರ ಆಗುತ್ತಿರಲಲ್ಲ. ಆದರೆ ಉದ್ಯಮಿಗಳು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಅವಕಾಶ ಕಲ್ಪಿಸಲಾಗಿದೆ. ನಗರದ ಪ್ರಥಮ ಪ್ರಜೆ ಸುಧೀರ್ ಶೆಟ್ಟಿಯವರನ್ನೂ ಕರೆಯಲಿಲ್ಲ’ ಎಂದರು.
ನಳಿನ್ ಜೊತೆ ಇದ್ದವರ ಬಗ್ಗೆ ನಿರ್ಲಕ್ಷ್ಯವಹಿಸಲಾಗುತ್ತಿದೆ
‘ಪಕ್ಷದಲ್ಲಿ ನಳಿನ್ ಹಾಗೂ ಬ್ರಿಜೇಶ್ ಚೌಟ ಅವರ ಬಣಗಳು ನಿರ್ಮಾಣವಾಗಿದೆ. ನಳಿನ್ ಜೊತೆ ಇದ್ದವರಿಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿಯನ್ನೂ ನೀಡದೇ ಕಡೆಗಣಿಸಲಾಗುತ್ತಿದೆ. ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಅವರಿಗೆ ಟಿಕೆಟ್ ಸಿಗುವುದೇ ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ. ಈ ತರಹ ಆಗಬಾರದು. ಇದರಿಂದ ಚುನಾವಣೆ ಮೇಲೆ ಪರಿಣಾಮ ಉಂಟಾಗುತ್ತದೋ ಇಲ್ಲವೋ ಗೊತ್ತಿಲ್ಲ. ಬಣ ರಾಜಕೀಯದ ಬಗ್ಗೆ ಪಕ್ಷದೊಳಗೆ ಬೇಸರವಿರುವುದು ನಿಜ. ಕಾರ್ಯಕರ್ತರು ಫ್ಲೆಕ್ಸ್ ಬಂಟಿಂಗ್ಸ್ ಕಟ್ಟಲು ಸೀಮಿತ ಅಲ್ಲ. ಅವರನ್ನು ಗುರುತಿಸುವ ಕೆಲಸ ಆಗಬೇಕು’ ಎಂದರು.