ನ್ಯೂಸ್ ನಾಟೌಟ್: ನಾವು ಮಾಡುವ ಯಾವುದೇ ಒಂದು ಕೆಲಸಕ್ಕೂ ಶ್ರದ್ಧೆ ಇರಬೇಕು. ಭಕ್ತಿಯಿಂದ ಮಾಡಿದ ಕೆಲಸಕ್ಕೆ ಶ್ರೀ ಮಹಾಲಿಂಗೇಶ್ವರ ತನ್ನಿಂದ ತಾನೆ ಒಲಿಯುತ್ತಾನೆ ಅನ್ನುವ ನಂಬಿಕೆ ಭಕ್ತರದ್ದು. ಅಂತಹ ಭಕ್ತರ ನಂಬಿಕೆಯನ್ನು ಪುತ್ತೂರಿನ ಆ ಮುತ್ತು ಎಂದಿಗೂ ಸುಳ್ಳು ಮಾಡಿಲ್ಲ. ಅದಕ್ಕೆ ಸಾಕ್ಷಿಯಾಗಿರುವುದೇ IRCMD ಸಂಸ್ಥೆ.
ಶೈಕ್ಷಣಿಕ ತರಬೇತಿ ಸಂಸ್ಥೆಯಾಗಿ ಬೆಳೆದು, ಸುಳ್ಯ – ಪುತ್ತೂರಿನಲ್ಲಿ ಜನರ ವಿಶ್ವಾಸಕ್ಕೆ ಪಾತ್ರರಾಗಿರುವ ಈ IRCMD ಸಂಸ್ಥೆ ಕಳೆದ ಮೂರು ವರ್ಷಗಳಿಂದ ಪುತ್ತೂರ ಒಡೆಯನ ಸೇವ ಮಾಡುತ್ತಾ ಬಂದಿದೆ. ವೀರಮಂಗಲ ಅವಭೃತ ಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ಸೇಮಿಗೆ ಉಸಲಿ, ಪಾನಕ, ಜ್ಯೂಸ್ ವಿತರಿಸಿ ಭಕ್ತರ ದಾಹವನ್ನು ನೀಗಿಸುವ ಕೆಲಸವನ್ನು ಮಾಡುತ್ತಿದೆ. ಅಂತೆಯೇ ಈ ವರ್ಷ ಏ.18ರಂದು ದೇವರ ಉತ್ಸವ ಮೂರ್ತಿ ವೀರಮಂಗಲದ ಅವಭೃತ ಸ್ನಾನಕ್ಕೆ ತೆರಳಲಿದೆ. ಈ ವೇಳೆ IRCMD ನಿರ್ದೇಶಕಿ ಪ್ರಫುಲ್ಲ ಗಣೇಶ್ ಅವರ ಬೆದ್ರಾಳದ ಮನೆ ಎದುರು ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಸೇಮಿಗೆ ಉಸಲಿ, ಪುನಾರ್ ಪ್ಪುಳಿ ಪಾನಕ, ಜ್ಯೂಸ್ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಪ್ರತಿಕ್ರಿಯಿಸಿದ IRCMD ನಿರ್ದೇಶಕಿ ಪ್ರಫುಲ್ಲ ಗಣೇಶ್, ” ಕಳೆದ ಮೂರು ವರ್ಷಗಳಿಂದ ಇಂತಹ ಒಂದು ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿದ್ದೇವೆ. ದೇವರ ಸ್ಮರಣೆ, ಭಕ್ತರ ಸೇವೆಯಲ್ಲಿ ನಮಗೆ ಖುಷಿ ಇದೆ. ನಮ್ಮ ಸಂಸ್ಥೆ ಹಾಗೂ ಮನೆಯವರು ಸೇರಿಕೊಂಡು ಈ ಸೇವೆಯನ್ನು ಮಾಡುತ್ತಿದ್ದೇವೆ. ಈ ಸಲ ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಎದುರು ನೋಡುತ್ತಿದ್ದೇವೆ” ಎಂದು ತಿಳಿಸಿದರು.