ನ್ಯೂಸ್ ನಾಟೌಟ್: ಮುಂಬರುವ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಸಂಕಲ್ಪ ಪತ್ರ ಎಂಬ ಹೆಸರಿನ ಪ್ರಣಾಳಿಕೆಯನ್ನು ಇಂದು(ಎ.14) ಬಿಡುಗಡೆ ಮಾಡಿದ್ದಾರೆ. ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಅಮಿತ್ ಶಾ, ಫಲಾನುಭವಿಗಳಿಗೆ ಮೊದಲ ಪ್ರಣಾಳಿಕೆ ಪುಸ್ತಕವನ್ನು ಮೊದಲು ನೀಡಿದ್ದಾರೆ.
ಬಿಜೆಪಿ ಯಾವಾಗಲೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತದೆ, ಸಂಕಲ್ಪ ಪತ್ರ ನಮ್ಮ ಸಮರ್ಪಣೆ ಮುಂದಕ್ಕೆ ಕೊಂಡೊಯ್ಯುವ ಸಾಧನ,ಪ್ರತಿ ಚುನಾವಣೆ ಬಂದಾಗ ನಾವು ನಮ್ಮ ವಿಚಾರ ಜನರಿಗೆ ತಿಳಿಸುತ್ತೇವೆ, ನಂತರ ಆ ವಿಚಾರವನ್ನ ಅನುಷ್ಠಾನ ಮಾಡಿ ಮುಂದುವರಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಇದು ಕಾಂಗ್ರೆಸ್ನ ನ್ಯಾಯ ಪತ್ರಕ್ಕೆ ಪ್ರತ್ಯುತ್ತರವಾಗಲಿದೆ. 2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯುವ ಮೂಲಕ ತನ್ನ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ.
2024 ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯನ್ನು ತಯಾರಿಸಲು ಬಿಜೆಪಿ ಸಮಿತಿಯನ್ನು ರಚಿಸಿದೆ. ಅಧ್ಯಕ್ಷರು ಸೇರಿದಂತೆ 27 ಜನರನ್ನು ಈ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಯೋಜಕರಾಗಿದ್ದಾರೆ. ಸಚಿವ ಪಿಯೂಷ್ ಗೋಯಲ್ ಅವರನ್ನು ಸಹ ಸಂಚಾಲಕರನ್ನಾಗಿ ಮಾಡಲಾಯಿತು.