ನ್ಯೂಸ್ ನಾಟೌಟ್: ಬಾಲಿವುಡ್ ನಟಿ ಆಯೇಷಾ ಜುಲ್ಕಾ ತಮ್ಮ ಸಾಕು ನಾಯಿ ರಾಕಿ ನಿಗೂಢ ಸಾವಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 2020ರಲ್ಲಿ ಆಯೇಷಾರ ಬಂಗಲೆಯಲ್ಲಿ 6 ವರ್ಷದ ಮುದ್ದಿನ ನಾಯಿ ರಾಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ನಟಿ ಕೇರ್ ಟೇಕರ್ ರಾಮ್ ಎಂಬಾತನ ಮೇಲೆ ಅನುಮಾನಗೊಂಡು ಪೊಲೀರಿಗೆ (Police) ದೂರು ನೀಡಿದ್ದರು.
ಆದರೆ 4 ವರ್ಷ ಕಳೆದರೂ ಈ ಪ್ರಕರಣ ವಿಚಾರಣೆ ನಡೆದಿಲ್ಲ. ಹಾಗಾಗಿ ತ್ವರಿತ ವಿಚಾರಣೆ ನಡೆಸುವಂತೆ ನಟಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕುರ್ಬಾನ್ ಮತ್ತು ಜೋ ಜೀತಾ ವೋಹಿ ಸಿಕಂದರ್ ಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದ ಬಾಲಿವುಡ್ ನಟಿ ಆಯೇಷಾ ಜುಲ್ಕಾರ ನಾಯಿ ಸೆಪ್ಟೆಂಬರ್ 13, 2020 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ಕೇರ್ ಟೇಕರ್ ರಾಮ್ ನೀರಿನಲ್ಲಿ ಮುಳುಗಿ ಸತ್ತಿದೆ ಎಂದು ತಿಳಿಸಿದ್ದ.
ಆದರೆ ಅನುಮಾನಗೊಂಡ ನಟಿ ನಾಯಿಯ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ವೈದ್ಯರು ನಾಯಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿದ್ದರಿಂದ ಸಾವನ್ನಪ್ಪಿದೆ ಎಂದು ವರದಿ ನೀಡಿದ್ದರು. ಜೊತೆಗೆ ನಾಯಿ ನೀರಿನಲ್ಲಿ ಮುಳುಗಿ ಸತ್ತಿರುವುದಕ್ಕೆ ಯಾವುದೇ ಪುರಾವೆ ಸಿಕ್ಕಿರಲಿಲ್ಲ ಎಂದಿದ್ದರು. ಸೆಪ್ಟೆಂಬರ್ 17, 2020 ರಂದು, ಕೇರ್ ಟೇಕರ್ ರಾಮ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಕುಡಿದ ಅಮಲಿನಲ್ಲಿ ನಾಯಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಆತ ಪೊಲೀಸರ ಬಳಿ ಒಪ್ಪಿಕೊಂಡಿದ್ದ. ಸೆಪ್ಟೆಂಬರ್ 25 ರಂದು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು.
ಆದರೆ ಎರಡು ದಿನಗಳ ನಂತರ ಜಾಮೀನು ಮಂಜೂರಾಗಿದೆ. ಜನವರಿ 7, 2021 ರಂದು, ಮಾವಲ್ ಪೊಲೀಸರು ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಅನ್ನು ಸಹ ಸಲ್ಲಿಸಿದ್ದರು. ಆದರೆ ಅಂದಿನಿಂದ ಪ್ರಕರಣ ಬಾಕಿ ಉಳಿದುಕೊಂಡಿದೆ. ತನಿಖೆಯ ಸಮಯದಲ್ಲಿ, ರಕ್ತದ ಕಲೆಯಿದ್ದ ಬೆಡ್ ಶೀಟ್ ಅನ್ನು ಪುಣೆಯ ಫೋರೆನ್ಸಿಕ್ ಲ್ಯಾಬ್ಗೆ ಕಳುಹಿಸಲಾಗಿದೆ. ಅದರ ವರದಿ ಇನ್ನೂ ಬಂದಿಲ್ಲ ಎಂದು ನಟಿ ಆರೋಪಿಸಿದ್ದಾರೆ. ಆಯೇಷಾ ಜುಲ್ಕಾ ತಮ್ಮ ನೀಡಿರುವ ದೂರಿನ ಮೇಲೆ ಕಾನೂನು ಕ್ರಮ ಜರುಗಿಸಲು ಸರ್ಕಾರಿ ವಕೀಲರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಪ್ರಾಸಿಕ್ಯೂಷನ್ ಡೈರೆಕ್ಟರೇಟ್, ಮುಂಬೈಗೆ ದೂರು ನೀಡಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜುಲ್ಕಾ ಇದೀಗ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.ತ್ವರಿತವಾಗಿ ವಿಚಾರಣೆ ನಡೆಸಲು ಏಕಸದಸ್ಯ ಪೀಠಕ್ಕೆ ಆದೇಶಿಸಿದೆ.