ನ್ಯೂಸ್ ನಾಟೌಟ್: ವಿಶ್ವದ ದೈತ್ಯ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿಯಾಗಿರುವ ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುವ ಸುಳಿವು ನೀಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ನೊಂದಿಗೆ ಇವಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಜಂಟಿ ಉದ್ಯಮದ ಆರಂಭಕ್ಕೆ ಸಿದ್ದವಾಗುತ್ತಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗಾಗಿ ಈಗಾಗಲೇ ಹಲವು ಬಾರಿ ಪ್ರಯತ್ನಿಸಿ ಹಿಂದೆ ಸರಿದಿರುವ ಟೆಸ್ಲಾ ಕಂಪನಿಯು ಈ ಬಾರಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೊತೆಗೆ ಇವಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸುಳಿವು ನೀಡಿದ್ದು, ಹೊಸ ಯೋಜನೆಗಾಗಿ ಕಂಪನಿಯು ಆರಂಭಿಕ ಬಂಡವಾಳವಾಗಿ ಬರೋಬ್ಬರಿ 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಸಾಧ್ಯತೆಗಳಿವೆ.
ಹೊಸ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ಸ್ಥಾಪನೆಗಾಗಿ ಈಗಾಗಲೇ ಟೆಸ್ಲಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಸೂಕ್ತವಾದ ಸೌಲಭ್ಯಗಳನ್ನು ಒಳಗೊಂಡ ಸ್ಥಳ ಹುಡುಕಾಟ ನಡೆಸುತ್ತಿದ್ದು, ಇದಕ್ಕಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳೊಂದಿಗೆ ವಿವಿಧ ಹಂತದ ಮಾತುಕತೆಗಳು ಕೂಡಾ ನಡೆದಿವೆ ಎನ್ನಲಾಗಿದೆ. ಇನ್ನು ಭಾರತವನ್ನು ಇವಿ ವಾಹನಗಳ ಉತ್ಪಾದನೆಯ ಪ್ರಮುಖ ತಾಣವಾಗಿಸುವ ಉದ್ದೇಶದಿಂದ ಹೊಸ ಇವಿ ನೀತಿ ಘೋಷಿಸಿರುವ ಕೇಂದ್ರ ಸರ್ಕಾರವು ಆಮದು ಸುಂಕ ಕಡಿಮೆ ಮಾಡುವುದಾಗಿ ಘೋಷಿಸಿದ್ದು, ಇದರ ಬೆನ್ನಲ್ಲೇ ಟೆಸ್ಲಾ ಕಂಪನಿ ಭಾರತದಲ್ಲಿ ಹೂಡಿಕೆಗೆ ಸಜ್ಜಾಗಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಇವಿ ಪರಿಚಯಿಸುವ ಯೋಜನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿರುವ ಟೆಸ್ಲಾದ ಸಿಇಒ ಎಲಾನ್ ಮಸ್ಕ್, ಹೊಸ ಬಂಡವಾಳ ಹೂಡಿಕೆ ಕುರಿತು ದೃಢಪಡಿಸಿದ್ದಾರೆ. ಹೀಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಟೆಸ್ಲಾ ಇವಿ ಕಾರುಗಳು ಭಾರತದಲ್ಲಿ ಉತ್ಪಾದನೆಯಾಗುವ ಎಲ್ಲಾ ಸಾಧ್ಯತೆಗಳಿದ್ದು, ಇವು ಚೈನಾ ಮೂಲದ ಹಲವು ಇವಿ ಕಾರು ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.