ನ್ಯೂಸ್ ನಾಟೌಟ್: ಹುಲಿ ಸೆರೆ ಕಾರ್ಯಾಚರಣೆ ಮಾಡುತ್ತಿದ್ದ ತಂಡದ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಕೊಡಗಿನ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ಘಟನೆ ನಡೆದಿದೆ. ಅರಣ್ಯಾಧಿಕಾರಿ ಕನ್ನಂಡ ರಂಜನ್, ಮಾವುತ ಕುಳ್ಳ ಹಾಗೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಭೀಮ ಹೆಸರಿನ ಆನೆ ಮೇಲೆ ಜೇನು ಹುಳುಗಳು ಎರಗಿದೆ. ಹರಿಹರ ಗ್ರಾಮದಲ್ಲಿ ನಿನ್ನೆ ಬುಧವಾರ(ಎ.೧೦) ಹುಲಿಯೊಂದು ಕಾಣಿಸಿಕೊಂಡಿತ್ತು.
ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದರು. ಹುಲಿಸೆರೆಗೆ ಗುರುವಾರ(ಎ.೧೧) ಕಾರ್ಯಾಚರಣೆ ಆರಂಭಿಸಲಾಗಿತ್ತು. ಎರಡು ಸಾಕು ಆನೆ ಜತೆಗೆ 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. ಹೆಜ್ಜೇನು ದಾಳಿಗೆ ಬೆದರಿ ಭೀಮ ಆನೆ ಓಡಿದೆ. ಸದ್ಯ ಅಸ್ವಸ್ಥ ಅರಣ್ಯಾಧಿಕಾರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.