ನ್ಯೂಸ್ ನಾಟೌಟ್:ಇತ್ತೀಚೆಗಂತು ಎಲ್ಲಿ ನೋಡಿದರೂ ಕಸದ ಸಮಸ್ಯೆ ಎದುರಾಗುತ್ತಿದೆ.ರಾತ್ರೋ ರಾತ್ರಿ ಬಂದು ರಾಶಿ ರಾಶಿ ಕಸ ಸುರಿಯುವ ಲಜ್ಜೆಗೆಟ್ಟ ಜನರಿಗೇನು ನಮ್ಮಲ್ಲಿ ಕೊರತೆಯಿಲ್ಲ.ಹೀಗಾಗಿ ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸದರೂ ಕಡಿಮೆಯೇ.ಮನೆ ಮನೆಗೆ ಕಸದ ಗಾಡಿ ಬಂದು ನಿಂತರೂ ಕೂಡ ರಸ್ತೆ ಮಧ್ಯದಲ್ಲಿ ಕಸ ಸುರಿಯುವ ಜನರೂ ನಮ್ಮ ಮಧ್ಯೆಯಿದ್ದಾರೆ. ಇಂತಹವರಿಗೆ ತಕ್ಕ ಪಾಠ ಕಲಿಸಬೇಕು ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಎಸೆಯಬಾರದೆಂದು, ದಕ್ಷಿಣ ಕನ್ನಡ ಜಿಲ್ಲೆಯ ತೋಕೂರಿನ ಗ್ರಾಮಸ್ಥರು, ಬೀದಿ ಬದಿಯಲ್ಲಿ ಎಸೆದು ಹೋಗುವಂತಹ ಸ್ಥಳದಲ್ಲಿ ವಿಚಿತ್ರವಾಗಿ ಬರೆದು ಬ್ಯಾನರ್ ಒಂದನ್ನು ಅಳವಡಿಸಿದ್ದಾರೆ.
ಬೀದಿ ಬದಿಯಲ್ಲಿ ಎಸೆದು ಹೋಗುವಂತಹ ಸ್ಥಳದಲ್ಲಿ “ನಿನ್ನ ಚಿತೆಗೆ ಬೆಂಕಿ ಹಚ್ಚಲು ಇಷ್ಟು ಕಸ ಸಾಲದು, ಜೊತೆಗೆ ನಿನ್ನ ಪಿಂಡವನ್ನು ಕೂಡಾ ಬಿಡುತ್ತೇವೆ” ಎಂಬ ಬರಹವನ್ನು ಬರೆದಿರುವ ಬ್ಯಾನರ್ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.ಈ ವೈರಲ್ ವಿಡಿಯೋವನ್ನು ವೀರ ವಸಂತ್ ಕುಮಾರ್ ಕೋಟ್ಯಾನ್ (@veeer_kotian) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಬಾರದೆಂದು ಬೀದಿ ಬದಿಯಲ್ಲಿ ಒಂದು ಬ್ಯಾನರ್ ಹಾಕಿ ಅದರಲ್ಲಿ ನಿನ್ನ ಚಿತೆಗೆ ಬೆಂಕಿ ಹಚ್ಚಲು ಇಷ್ಟು ಕಸ ಸಾಕಾಗುವುದಿಲ್ಲ, ಇನ್ನಷ್ಟು ಕಸವನ್ನು ತಂದು ಇಲ್ಲಿ ಸುರಿ, ಇಲ್ಲೇ ಈ ಕಸದ ಜೊತೆಗೆ ನಿನ್ನ ಪಿಂಡವನ್ನು ಬಿಡುತ್ತೇವೆ; ಭಾವಪೂರ್ಣ ಶ್ರದ್ಧಾಂಜಲಿ, ಇದು ಇಲ್ಲಿ ಕಸ ಬಿಸಾಡುವ ದಿವ್ಯ ಆತ್ಮಗಳಿಗೆ ಅರ್ಪಣೆ” ಎಂಬ ಬರಹವನ್ನು ಬರೆದಿರುವುದನ್ನು ಕಾಣಬಹುದು.
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಮಿಲಿಯನ್ಗಟ್ಟಲೆ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹೌದು ಕಸ ಎಸೆಯುವವರಿಗೆ ಇದೊಂದು ಒಳ್ಳೆಯ ಪಾಠ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.