ವರದಿ: ಹರ್ಷಿತಾ ವಿನಯ್
ನ್ಯೂಸ್ ನಾಟೌಟ್: ಅನ್ನದಾನಕ್ಕಿಂತ ದೊಡ್ಡ ದಾನ ಮತ್ತೊಂದಿಲ್ಲ ಅಂತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ದಾನಗಳ ಸಾಲಿಗೆ ರಕ್ತದಾನವೂ ಕೂಡ ಸೇರಿಕೊಂಡಿದೆ ಅನ್ನೋದು ವಿಶೇಷ. ಇಲ್ಲೊಬ್ಬರು ಮಹಿಳೆ ತನ್ನ ಹುಟ್ಟು ಹಬ್ಬದ ದಿನದಂದೇ ರಕ್ತದಾನ ಮಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರಿದ್ದಾರೆ. ಒಂದು ಜೀವ ಉಳಿಸಲು ನಾವೆಲ್ಲರೂ ಒಂದಾಗೋಣ ಅನ್ನುವ ಸಂದೇಶವು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
ಸಂಧ್ಯಾ ಕೆ.ಎಸ್ ಇವರು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಸ್ವಾಗತಕಾರಿಣಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಹುಟ್ಟು ಹಬ್ಬದ ದಿನವನ್ನು ಸ್ಮರಣೀಯವಾಗಿ ಆಚರಿಸಬೇಕು. ದುಂದುವೆಚ್ಚವನ್ನು ಮಾಡದೆ ಸರಳವಾಗಿ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸಬೇಕು ಎಂದು ಮನದಲ್ಲಿ ಅಂದುಕೊಂಡಿದ್ದರು. ಮಾತ್ರವಲ್ಲ ಅದನ್ನು ಜಾರಿಗೆ ತಂದೇ ಬಿಟ್ಟರು. ತಮ್ಮದೇ ಸಂಸ್ಥೆಯ ಬ್ಲಡ್ ಬ್ಯಾಂಕ್ ಗೆ ತೆರಳಿದ ಅವರು ರಕ್ತದಾನ ಮಾಡಿದರು. ಅನೇಕ ಸಲ ತುರ್ತು ನಿಗಾ ಚಿಕಿತ್ಸಾ ಘಟಕದಲ್ಲಿ ರಕ್ತಕ್ಕಾಗಿ ಪೇಷೆಂಟ್ ಕಡೆಯವರು ಒದ್ದಾಡುವುದನ್ನು ಕಣ್ಣಾರೆ ಕಂಡಿರುವ ಸಂಧ್ಯಾ ಕೆ.ಎಸ್ ಅವರು ರಕ್ತದ ಮಹತ್ವ ಏನು ಅನ್ನುವುದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಇದೇ ವೇಳೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿರುವ ಸಂಧ್ಯಾ ಅವರು, ‘ರಕ್ತದಾನ ಶ್ರೇಷ್ಠ ದಾನ. ಮತ್ತೊಂದು ಜೀವ ಉಳಿಸಲು ನಾವೆಲ್ಲರೂ ರಕ್ತದಾನ ಮಾಡೋಣ. ಒಂದು ಜೀವ ಉಳಿಸಲು ನಮ್ಮಿಂದ ಇಷ್ಟು ಸಾಧ್ಯವಾಗುವುದಾದರೆ ಅದಕ್ಕಿಂತ ದೊಡ್ಡದು ಬೇರೆ ಏನಿದೆ..? ಎಂದು ಖುಷಿಯಿಂದ ತಿಳಿಸಿದ್ದಾರೆ.