ನ್ಯೂಸ್ ನಾಟೌಟ್: ರಾಜ್ಯದ 223 ಬರ ಪೀಡಿತ ತಾಲೂಕುಗಳ 1ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಏ.11ರಿಂದ ಮೇ 28ರವರೆಗೆ ಒಟ್ಟು 41 ದಿನಗಳ ಕಾಲ ಮಧ್ಯಾಹ್ನ 12.30ರಿಂದ 2 ಗಂಟೆವರೆಗೆ ಊಟ ನೀಡಲಾಗುತ್ತದೆ. ಉಷ್ಣಾಂಶ ಹೆಚ್ಚಿರುವ ಜಿಲ್ಲೆಗಳಲ್ಲಿ ಮಾತ್ರ ಬೆಳಗ್ಗೆ 10 ಗಂಟೆಯಿಂದ 11.30 ಅವಧಿಯಲ್ಲಿ ವಿತರಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಶಾಲಾ ಮಕ್ಕಳ ಮಾಹಿತಿ ಅನುಗುಣವಾಗಿ ಬಿಸಿಯೂಟ ಸಿದ್ಧಪಡಿಸಿಬೇಕು ಎಂದು ತಿಳಿಸಲಾಗಿದೆ. ಬಿಸಿಯೂಟ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಮತ್ತು ಪಾಲಕರ ಗಮನಕ್ಕೆ ತಂದು ಬಿಸಿಯೂಟ ಸ್ವೀಕರಿಸುವ ಒಪ್ಪಿಗೆ ಪತ್ರ ಪಡೆಯಬೇಕು.
ಬಿಸಿಯೂಟ ಕೇಂದ್ರಗಳಾಗಿ ಗುರುತಿಸಿದ ಶಾಲೆಯಲ್ಲಿ 250 ಕ್ಕಿಂತ ಹೆಚ್ಚು ಮಕ್ಕಳು ನಿರಂತರವಾಗಿ ಬಿಸಿಯೂಟ ಸ್ವೀಕರಿಸಲು ಹಾಜರಾಗುತ್ತಿದ್ದಲ್ಲಿ, ಅಂತಹ ಕೇಂದ್ರ ಶಾಲೆಗಳಿಗೆ ಮಾತ್ರ ಒಬ್ಬರು ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಿಕ್ಷಣಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಮೇಲ್ವಿಚಾರಣೆಗಾಗಿ ಪ್ರತಿನಿತ್ಯ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಲಾಗಿದೆ.