ನ್ಯೂಸ್ ನಾಟೌಟ್: ನಾಳೆ(ಎ.8) ವರ್ಷದ ಮೊದಲ ಸೂರ್ಯ ಗ್ರಹಣ,ಯಾವ ಹೊತ್ತಿಗೆ ಗೋಚರ? ಇಲ್ಲಿದೆ ಸಂಪೂರ್ಣ ಮಾಹಿತಿ 2024 ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಅಂದರೆ ಏಪ್ರಿಲ್ 8 ಸೋಮವಾರ ಸಂಭವಿಸುತ್ತಿದ್ದು, ಭಾರತದಲ್ಲಿ ಈ ಗ್ರಹಣ ಗೋಚರವಾಗುತ್ತಿಲ್ಲ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಈ ಬಾರಿ ಸೂರ್ಯಗ್ರಹಣವು ಉತ್ತರ ಅಮೆರಿಕ (north america) ಖಂಡದಾದ್ಯಂತ ಕಾಣಿಸುತ್ತಿದ್ದು, ಮೆಕ್ಸಿಕೋ (Mexico), ಯುನೈಟೆಡ್ ಸ್ಟೇಟ್ಸ್ (United States) ಮತ್ತು ಕೆನಡಾದಲ್ಲಿ (Canada) ಸ್ಥಳೀಯ ಕಾಲಮಾನ ಬೆಳಗ್ಗೆ 11.07ರ ಸುಮಾರಿಗೆ ಸೂರ್ಯಗ್ರಹಣ ಪ್ರಾರಂಭವಾಗಲಿದೆ. ಪೆಸಿಫಿಕ್ ಕರಾವಳಿಯ ಪ್ರದೇಶದ ಮೆಕ್ಸಿಕೋದಲ್ಲಿ ಮೊದಲು ಸೂರ್ಯಗ್ರಹಣ ಗೋಚರವಾಗಲಿದೆ. ಅಲ್ಲದೆ ಟೆಕ್ಸಾಸ್, ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವರ್ಮೊಂಟ್, ನ್ಯೂ ಹ್ಯಾಂಪ್ಶೈರ್ ಮತ್ತು ಮೈನೆ ಮೊದಲಾದ ರಾಜ್ಯಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗುವುದು.
ಟೆಕ್ಸಾಸ್ನಲ್ಲಿ ಆರಂಭವಾಗಿ ಮೆಕ್ಸಿಕೋ, ಯುಕಾಟಾನ್ ಪೆನಿನ್ಸುಲಾ, ಗ್ವಾಟೆಮಾಲಾ, ಹೊಂಡಾರುಸ್, ನಿಕರಾಗುವಾ, ಕೋಸ್ಟರಿಕಾದಲ್ಲಿ ಗೋಚರಿಸಿತ್ತು. ಪನಾಮ, ಮಧ್ಯ ಅಮೆರಿಕ, ಉತ್ತರ ಅಮೆರಿಕ, ಕೊಲಂಬಿಯಾ ಮತ್ತು ಬ್ರೆಜಿಲ್ನಲ್ಲೂ ಗೋಚರಿಸುವುದರ ಜತೆಗೆ ಅಲಾಸ್ಕಾ ಮತ್ತು ಅರ್ಜೆಂಟೀನಾದಲ್ಲೂ ಗ್ರಹಣ ಸಂಭವಿಸಿತ್ತು. ಹೀಗಾಗಿ ಈ ಭಾಗದಲ್ಲಿ ಮಾತ್ರ ಗ್ರಹಣ ಪರಿಣಾಮ ಉಂಟಾಗಿದೆ. ಭಾರತದಲ್ಲಿ ಇದರ ಪರಿಣಾಮ ಇರುವುದಿಲ್ಲ ಎಂದು ವರದಿ ತಿಳಿಸಿದೆ.