ನ್ಯೂಸ್ ನಾಟೌಟ್: ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಸಂಸ್ಥೆಯ (ಬಿಎಂಸಿಆರ್ಐ) ಬಾಲಕಿಯರ ಹಾಸ್ಟೆಲ್ನ 47 ವಿದ್ಯಾರ್ಥಿನಿಯರ ಪೈಕಿ ಇಬ್ಬರಲ್ಲಿ ಕಾಲರಾ ಸೋಂಕು ದೃಢಪಟ್ಟಿದೆ.
ಇದರಿಂದ ಆತಂಕಗೊಂಡ ಉಳಿದ ವಿದ್ಯಾರ್ಥಿಗಳು ಹಾಸ್ಟೆಲ್ ಖಾಲಿ ಮಾಡುತ್ತಿದ್ದಾರೆ. ಬೇಧಿ ಮತ್ತು ನಿರ್ಜಲೀಕರಣದಿಂದ ಆಸ್ಪತ್ರೆಗೆ ದಾಖಲಾದ 47 ವಿದ್ಯಾರ್ಥಿಗಳ ಪೈಕಿ, 22 ವಿದ್ಯಾರ್ಥಿನಿಯರಲ್ಲಿ ಕಾಲರಾ ಟೆಸ್ಟ್ ಮಾಡಲಾಗಿದ್ದು, ಇಬ್ಬರಲ್ಲಿ ಕಾಲರಾ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ 21 ವಿದ್ಯಾರ್ಥಿನಿಯರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಸದ್ಯ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದ್ದು, ಇಬ್ಬರು ವಿದ್ಯಾರ್ಥಿನಿಯರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಎಂಸಿಆರ್ ತಿಳಿಸಿದೆ. ಕಾಲರಾ ಸೋಂಕು ಭೀತಿಯಿಂದ ಕೆಲವು ಮೆಡಿಕಲ್ ವಿದ್ಯಾರ್ಥಿನಿಯರು ಲಗೇಜ್ ಸಮೇತ ಹಾಸ್ಟೆಲ್ ಖಾಲಿ ಮಾಡಿದರೆ ಇನ್ನೂ ಕೆಲವರು ಬೇರೆ ಹಾಸ್ಟೆಲ್ಗೆ ಸ್ಥಳಾಂತರವಾಗುತ್ತಿದ್ದಾರೆ.ಉಳಿದುಕೊಂಡ ವಿದ್ಯಾರ್ಥಿನಿಯರು ಆಹಾರಕ್ಕಾಗಿ ಸ್ವಿಗ್ಗಿ, ಝೋಮೆಟೋ ಮೊರೆ ಹೋಗುತ್ತಿದ್ದಾರೆ. ಹಾಸ್ಟೆಲ್ ನಿಂದ ಸ್ವಲ್ಪ ದಿನಕ್ಕಾಗಿ ಮನೆ ಹಾಗೂ ಬೇರೆಡೆ ಇರಲು ಬ್ಯಾಗ್ ಸಮೇತ ವಿದ್ಯಾರ್ಥಿನಿಯರು ಹೋಗುತ್ತಿದ್ದಾರೆ.