ನ್ಯೂಸ್ ನಾಟೌಟ್ : ಮಕ್ಕಳ ಕಳ್ಳಸಾಗಣೆ ಪ್ರಕರಣ ಸಂಬಂಧ ದೆಹಲಿಯ ಹಲವು ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಈ ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿ ತಿಳಿಸಿದೆ. ಬಂಧಿತರಲ್ಲಿ ಆಸ್ಪತ್ರೆಯ ವಾರ್ಡ್ ಬಾಯ್ ಸೇರಿದಂತೆ ಕೆಲವು ಮಹಿಳೆಯರು ಮತ್ತು ಪುರುಷರು ಸೇರಿದ್ದಾರೆ. ಶುಕ್ರವಾರ(ಎ.೫) ಸಂಜೆ ದೆಹಲಿ-ಎನ್ಸಿಆರ್ನ ಹಲವೆಡೆ ಸಿಬಿಐ ದಾಳಿ ನಡೆಸಿತ್ತು.
ದಾಳಿ ವೇಳೆ ಸಿಬಿಐ ತಂಡ ಕೇಶವಪುರಂನ ಮನೆಯೊಂದರಿಂದ 2 ನವಜಾತ ಶಿಶುಗಳನ್ನು ಮತ್ತು 8 ಮಕ್ಕಳನ್ನು ರಕ್ಷಿಸಿದೆ. ಸದ್ಯ ಸಿಬಿಐ ತಂಡ ಈ ಪ್ರಕರಣದಲ್ಲಿ ಮಕ್ಕಳನ್ನು ಮಾರಾಟ ಮಾಡಿದ ಮಹಿಳೆ ಹಾಗೂ ಖರೀದಿಸಿದ ವ್ಯಕ್ತಿಯ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಕೆಲವರನ್ನು ಸಿಬಿಐ ವಶಕ್ಕೆ ಪಡೆದಿದ್ದು, ಅವರ ವಿಚಾರಣೆ ನಡೆಯುತ್ತಿದೆ. ಸಿಬಿಐ (CBI) ಮೂಲಗಳ ಪ್ರಕಾರ, ಕಳೆದ ಒಂದು ತಿಂಗಳಲ್ಲಿ ಸುಮಾರು 10 ಮಕ್ಕಳನ್ನು ಮಾರಾಟ ಮಾಡಲಾಗಿದೆ. ಈ ಗ್ಯಾಂಗ್ ನ ನಂಟುಗಳು ಹಲವು ರಾಜ್ಯಗಳಲ್ಲಿ ಹರಡಿಕೊಂಡಿವೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಮಾಹಿತಿ ಪ್ರಕಾರ ನವಜಾತ ಶಿಶುಗಳನ್ನು 4 ರಿಂದ 5 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ. ದೆಹಲಿಯ ಕೆಲವು ದೊಡ್ಡ ಆಸ್ಪತ್ರೆಗಳಿಂದ ಮಕ್ಕಳು ಕಾಣೆಯಾಗಿದ್ದಾರೆ ಎಂಬ ವರದಿಗಳು ಬಂದಿವೆ. ನಂತರ ಸಿಬಿಐ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿ ಮಹಿಳೆ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಮಕ್ಕಳ ವ್ಯಾಪಾರದ ಬಗ್ಗೆ ಮಾಹಿತಿ ಪಡೆದ ಸಿಬಿಐ, ನಾಪತ್ತೆಯಾದ ಮಕ್ಕಳೊಂದಿಗೆ ಸಂಪರ್ಕ ಸಾಧಿಸಿ ದಾಳಿ ನಡೆಸಿದೆ ಎನ್ನಲಾಗಿದೆ.