ನ್ಯೂಸ್ ನಾಟೌಟ್: ಯುದ್ಧದ ಭೀಕರತೆಗೆ ನರಳಿ ಹೋಗಿದ್ದ ಜನರಿಗೆ ನೆರವು ನೀಡಲು ಬಂದಿದ್ದವರು. ಆದರೆ ಅಲ್ಲಿ ಆಗಿದ್ದೇ ಬೇರೆ, ಯುದ್ಧ ನಡೆಯುತ್ತಿರುವ ರಣರಂಗದಲ್ಲಿ ಜೀವ ಉಳಿಸಲು ಬಂದ ಅವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.
ಅಂದಹಾಗೆ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸಿದ ವಾಯು ದಾಳಿಗೆ ಮಾನವೀಯ ನೆರವು ನೀಡಲು ಹೋಗಿದ್ದ 7 ಮಂದಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ‘ ವರ್ಲ್ಡ್ ಸೆಂಟ್ರಲ್ ಕಿಚನ್ ಚಾರಿಟೇಬಲ್ ಟ್ರಸ್ಟ್’ನ 7 ಸ್ವಯಂ ಸೇವಕರು ಹೀಗೆ ಯುದ್ಧ ಭೂಮಿಯಲ್ಲಿ ಇಸ್ರೇಲ್ ಸೇನೆಯ ದಾಳಿಗೆ ಬಲಿಯಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ. ಕೇಂದ್ರ ಗಾಜಾದ, ಡೇರ್ ಅಲ್ ಬಲ್ಲಾ ಎಂಬಲ್ಲಿ ಘಟನೆ ನಡೆದಿದ್ದು, ಮೃತಪಟ್ಟ ಸ್ವಯಂ ಸೇವಕರಲ್ಲಿ ಅಮೆರಿಕ, ಕೆನಡಾದ ಇಬ್ಬರು ಕೂಡ ಸೇರಿದ್ದಾರೆ ಎಂಬುದು ಈಗ ಕಿಚ್ಚು ಹೊತ್ತಿಸಿದೆ.
ಇನ್ನು ಎಲ್ಲರೂ ತಮ್ಮ ಸ್ವಾರ್ಥ ಮರೆತು, ಯುದ್ಧ ಭೂಮಿಯಲ್ಲಿ ಆಹಾರ ಇಲ್ಲದೆ ಪ್ರತಿನಿತ್ಯ ನರಳಾಡುತ್ತಿದ್ದ ಜನರ ನೆರವಿಗೆ ನಿಂತಿದ್ದರು. ಹಾಗೇ ‘ವರ್ಲ್ಡ್ ಸೆಂಟ್ರಲ್ ಕಿಚನ್ ಚಾರಿಟೇಬಲ್ ಟ್ರಸ್ಟ್’ ಕಡೆಯಿಂದ ಬಂದಿದ್ದ 100 ಟನ್ ಆಹಾರ ಸಾಮಗ್ರಿ ತಲುಪಿಸುತ್ತಿದ್ದರು. ಟ್ರಕ್ ಮೂಲಕ ಅವರು ಆಹಾರ ಸಾಮಾಗ್ರಿಗಳನ್ನು ಉಗ್ರಾಣಕ್ಕೆ ಸಾಗಿಸುತ್ತಿದ್ದರು. ಆದರೆ ಇದೇ ವೇಳೆ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸಿದೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಸ್ವಯಂ ಸೇವಕರ ಪೈಕಿ 7 ಜನರು ಬಲಿಯಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.