ನ್ಯೂಸ್ ನಾಟೌಟ್: ವಿವಾಹೇತರ ಸಂಬಂಧದ ಪ್ರೇಮಿ ಮತ್ತು ಮತ್ತು ಗಂಡ ಇಬ್ಬರೂ ಬೇಕು ಎಂದು ಮಹಿಳೆಯೊಬ್ಬಳು ವಿದ್ಯುತ್ ಕಂಬದ ಮೇಲೆ ಹತ್ತಿ ಕುಳಿತ ಘಟನೆ ಉತ್ತರ ಪ್ರದೇಶದ ಪಟ್ಟಣವೊಂದರಲ್ಲಿ ನಡೆದಿದೆ. ಗೋರಖ್ಪುರದ ಪಿಪ್ರೈಚ್ನಲ್ಲಿ 34 ವರ್ಷದ ಮೂರು ಮಕ್ಕಳ ತಾಯಿಯೊಬ್ಬಳು ತನ್ನ ವಿವಾಹೇತರ ಸಂಬಂಧದ ಬಗ್ಗೆ ಪತಿಗೆ ತಿಳಿದ ನಂತರ ವಿದ್ಯುತ್ ಕಂಬವನ್ನು ಹತ್ತುವ ಮೂಲಕ ರಾದ್ದಾಂತ ಸೃಷ್ಟಿಸಿದ್ದಾಳೆ.
ಮಹಿಳೆ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದಳು. ಆದರೆ ಕ್ರಮೇಣ ಆಕೆಗೆ ಪಕ್ಕದ ಗ್ರಾಮದ ವ್ಯಕ್ತಿಯೊಬ್ಬರ ಪರಿಚಯವಾಗಿದೆ. ಈ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಕಳೆದ 7 ವರ್ಷಗಳಿಂದ ಪತಿಗೆ ತಿಳಿಯದಂತೆ ಇವರಿಬ್ಬರ ಪ್ರೇಮ ಪುರಾಣ ನಡೆಯುತ್ತಿತ್ತು. ಮಹಿಳೆಯ ಪತಿ ರಾಮ್ ಗೋವಿಂದ್ ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು.
ಆದರೆ ಇತ್ತೀಚೆಗೆ ಇವರಿಬ್ಬರ ಪ್ರೀತಿ ವಿಚಾರ ಪತಿಯ ಗಮನಕ್ಕೆ ಬಂದಿದೆ. ಹೀಗಾಗಿ ದಂಪತಿ ನಡುವೆ ವಾಗ್ವಾದ ನಡೆಯಿತು. ಅಲ್ಲದೇ ಪ್ರಿಯತಮನಿಗೂ ಮನೆಯಲ್ಲಿ ಇರಲು ಅವಕಾಶ ಕಲ್ಪಿಸಬೇಕು ಮತ್ತು ಮನೆಯ ಆರ್ಥಿಕತೆಗೆ ಸಹಾಯ ಮಾಡಬೇಕೆಂದು ಒತ್ತಾಯಿಸಿದಳು. ಪತ್ನಿಯ ಮಾತಿನಿಂದ ರಾಮ್ ಗೋವಿಂದ್ ಪಿತ್ತ ನೆತ್ತಿಗೇರಿತು. ಕೂಡಲೇ ಮನೆಯಿಂದಲೇ ಹೊರ ನಡೆದನು. ಪತಿ ಮನೆಯಿಂದ ಹೊರ ನಡೆಯುತ್ತಿದ್ದಂತೆಯೇ ಪತಿ ಹಾಗೂ ಪ್ರಿಯತಮ ಇಬ್ಬರೂ ನನಗೆ ಬೇಕು ಎಂದು ಹೇಳಿ ಮನೆಯ ಪಕ್ಕದಲ್ಲೇ ಇರುವ ವಿದ್ಯುತ್ ಕಂಬವೇರಿ ಮಹಿಳೆ ಪ್ರತಿಭಟನೆ ನಡೆಸಿದ್ದಾಳೆ. ಮಹಿಳೆಯು ವಿದ್ಯುತ್ ಕಂಬವನ್ನು ಏರುತ್ತಿರುವುದು ನೋಡುಗರನ್ನು ದಿಗ್ಭ್ರಮೆಗೊಳಿಸಿತು. ಕೂಡಲೇ ಸ್ಥಳೀಯರು ಆಕೆಯನ್ನು ಕೆಳಗೆ ಇಳಿಯುವಂತೆ ಕೇಳಿಕೊಂಡಿದ್ದಾರೆ. ಹೈ-ಟೆನ್ಷನ್ ತಂತಿಗಳಿರುವ ಕಂಬವೇರಿ ಮಹಿಳೆ ಅಪಾಯಕಾರಿಯಾಗಿ ಕುಳಿತಿದ್ದಳು. ಪೊಲೀಸರು ಮನವೊಲಿಸಿ ಆಕೆಯನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.