ನ್ಯೂಸ್ ನಾಟೌಟ್: ಹಂದಿಯ ಮೂತ್ರಪಿಂಡವನ್ನು ಮನುಷ್ಯನಿಗೆ ಅಳವಡಿಸುವಲ್ಲಿ ಅಮೆರಿಕದ ಬೋಸ್ಟನ್ ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಹಂದಿಯ ಕಿಡ್ನಿ ಅಳವಡಿಕೆ ಬಳಿಕ ರೋಗಿ ಆರೋಗ್ಯವಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾನೆ ಎನ್ನಲಾಗಿದೆ. ವೇಮೌತ್ ನ ನಿವಾಸಿ 62 ವರ್ಷದ ರಿಕ್ ಸ್ಲೇಮನ್ ಗೆ ಹಂದಿ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಈ ಮೂಲಕ ಹಂದಿ ಮೂತ್ರಪಿಂಡ ಕಸಿ ಸ್ವೀಕರಿಸಿದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಸುಮಾರು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು, ಬುಧವಾರ(ಎ.4) ಮನೆಗೆ ತೆರಳಿದ್ದಾರೆ.
ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ. ಈ ಹಿಂದೆಯೂ ವೈದ್ಯರು ಮಾನವನಿಗೆ ಪ್ರಾಣಿಗಳ ಎರಡು ಅಂಗಾಂಗ ಕಸಿಗಳನ್ನು ನಡೆಸಿದ್ದರು. ಇದರಲ್ಲಿ ತಳೀಯವಾಗಿ ಮಾರ್ಪಡಿಸಿದ ಹಂದಿಗಳ ಅಂಗಗಳನ್ನು ಮನುಷ್ಯರಿಗೆ ನೀಡಲಾಗಿದೆ. ಆದರೂ ಎರಡೂ ಪ್ರಕರಣಗಳು ವಿಫಲವಾಗಿದ್ದವು. ಈ ಎರಡು ಪ್ರಕರಣಗಳಲ್ಲಿ ತಳೀಯವಾಗಿ ಮಾರ್ಪಡಿಸಿದ ಹಂದಿಗಳ ಹೃದಯವನ್ನು ಮನುಷ್ಯರಿಗೆ ಅಳವಡಿಸಲಾಗಿತ್ತು, ಅದೂ ಕೂಡ ವಿಫಲವಾಗಿತ್ತು ಎನ್ನಲಾಗಿದೆ.