ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ದಿನೇ ದಿನೇ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಬಿಸಿಲಿನ ಹೊಡೆತಕ್ಕೆ ಸಿಕ್ಕಿರುವ ಜನಜೀವನ ಸೆಕೆ..ಸೆಕೆ ಎಂದು ಒದ್ದಾಡುತ್ತಿದ್ದರೆ ಇತ್ತ ಫಾರ್ಮ್ ನಲ್ಲಿರುವ ಕೋಳಿಗಳು ಬಿಸಿಲಿನ ಝಳಕ್ಕೆ ತತ್ತರಿಸಿ ಜೀವ ಚೆಲ್ಲುತ್ತಿವೆ.
ಸತ್ತ ಕೋಳಿಗಳ ವಿಲೇವಾರಿ ಕಷ್ಟ..! ಬಿಸಿಲಿನ ಝಳಕ್ಕೆ ಸಿಲುಕಿ ಸಾಯುತ್ತಿರುವ ಕೋಳಿಗಳನ್ನು ಶೆಡ್ ನಿಂದ ತೆಗೆದು ಬೇರೆ ಕಡೆ ವರ್ಗಾಯಿಸುವುದೇ ಕೋಳಿಸಾಕಾಣೆದಾರರಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಸದ್ಯ ಕೋಳಿಗಳ ಗಾತ್ರ ಹೆಚ್ಚಾದಂತೆ ಕೋಳಿಗಳು ಸಾಯುತ್ತಿವೆ. ಹೀಗಾಗಿ ಕೋಳಿಗಳು ಹೆಚ್ಚು ಗಾತ್ರ ಹೊಂದದಂತೆಯೂ ನೋಡಿಕೊಳ್ಳಬೇಕಿರುವ ಅವಶ್ಯಕತೆ ಇದೆ ಎಂದು ಹೇಳಲಾಗುತ್ತಿದೆ.
ಹೆಚ್ಚಲಿದೆ ಚಿಕನ್ ರೇಟ್..! ದ.ಕ., ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಹಲವಾರು ಭಾಗದಲ್ಲಿ ಒಟ್ಟು 1,500 ಸಾಕಣೆದಾರರು 20ರಿಂದ 25 ಲಕ್ಷದಷ್ಟು ಕೋಳಿಗಳನ್ನು ಸಾಕುತ್ತಿದ್ದಾರೆ. ಆದರೆ ಈಗ ಅದರಲ್ಲಿ ಬಹುತೇಕ ಕೋಳಿಗಳು ಸತ್ತೇ ಹೋಗಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಚಿಕನ್ ಗೆ ಬೇಡಿಕೆ ಹೆಚ್ಚಿದಂತೆ ಪೂರೈಕೆ ಕಡಿಮೆ ಆಗುವುದರಿಂದ ದರ ಏರಲಿದೆ ಎಂದೇ ಹೇಳಲಾಗುತ್ತಿದೆ.