ನ್ಯೂಸ್ ನಾಟೌಟ್: ದುರಂತವೊಂದರಲ್ಲಿ ಕೇರಳದ ದಂಪತಿ ಹಾಗೂ ಅವರ ಸ್ನೇಹಿತೆಯೊಬ್ಬರು ಅರುಣಾಚಲ ಪ್ರದೇಶದ ಜಿರೋ ಪಟ್ಟಣದಲ್ಲಿ ಹೋಟೆಲ್ ಒಂದಲ್ಲಿ ಮಂಗಳವಾರ(ಎ.1) ನಿಗೂಢವಾಗಿ ಮೃತಪಟ್ಟಿದ್ದಾರೆ. ಇದು ಆತ್ಮಹತ್ಯೆಯಂತೆ ಕಂಡುಬಂದಿದೆ ಎನ್ನಲಾಗಿದೆ. ಮೂವರ ಮಣಿಕಟ್ಟಿನ ನರಗಳು ಕತ್ತರಿಸಲಾಗಿದ್ದು, ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಹೋಟೆಲ್ ಕೊಠಡಿಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿರುವ ಸಂದೇಶವು ಈ ಮೂವರೂ ವಾಮಾಚಾರಕ್ಕೆ ಬಲಿಯಾಗಿರುವ ಅನುಮಾನ ಮೂಡಿಸಿದೆ ಎಮದು ವರದಿ ತಿಳಿಸಿದೆ. ಮೃತರನ್ನು ಕೇರಳದ ಕೊಟ್ಟಾಯಂ ಜಿಲ್ಲೆಯ ಆಯುರ್ವೇದ ವೈದ್ಯರಾದ ನವೀನ್ ಥಾಮಸ್ (35) ಮತ್ತು ಅವರ ಪತ್ನಿ ದೇವಿ (35) ಎಂದು ಗುರುತಿಸಲಾಗಿದೆ. ಅವರ ಜತೆ ಸಾವಿಗೀಡಾದ ಮತ್ತೊಬ್ಬ ಮಹಿಳೆ ತಿರುವನಂತಪುರಂನ ಶಾಲಾ ಶಿಕ್ಷಕಿ ಆರ್ಯ ಬಿ ನಾಯರ್ (29) ಎಂದು ಗುರುತಿಸಲಾಗಿದೆ.
ಈ ಮೂವರೂ ಮಾರ್ಚ್ 28ರಂದು ಹೋಟೆಲ್ಗೆ ಬಂದಿದ್ದು, ಅಂದಿನಿಂದಲೂ ಒಂದೇ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ. ಆರ್ಯ ಮದುವೆ ಮುಂದಿನ ತಿಂಗಳಿಗೆ ನಿಶ್ಚಯವಾಗಿತ್ತು. ಆಕೆ ಕಾಣೆಯಾಗಿದ್ದಾರೆ ಎಂದು ಮಾರ್ಚ್ 27ರಂದು ಸಂಬಂಧಿಕರು ತಿರುವನಂತಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ತನಿಖೆ ನಡೆಸಿದ ಪೊಲೀಸರಿಗೆ, ಆಕೆ ನವೀನ್ ಮತ್ತು ದೇವಿ ಜತೆ ಗುವಾಹಟಿಗೆ ತೆರಳಿದ್ದು, ನಂತರ ಅರುಣಾಚಲ ಪ್ರದೇಶಕ್ಕೆ ಹೋಗಿರುವುದು ಗೊತ್ತಾಗಿತ್ತು. ಈ ಮೂವರೂ ಜಿರೋದಲ್ಲಿನ ಹೋಟೆಲ್ ಒಂದಕ್ಕೆ ಬಂದಿದ್ದರು.
ಮಾರ್ಚ್ 31ರವರೆಗೂ ಅವರು ಅಲ್ಲಿ ಸುತ್ತಾಡುವುದನ್ನು ಹೋಟೆಲ್ ಸಿಬ್ಬಂದಿ ನೋಡಿದ್ದರು. ಆದರೆ ಏಪ್ರಿಲ್ 1ರಂದು ಅವರನ್ನು ಯಾರೂ ನೋಡಿರಲಿಲ್ಲ. ಏಪ್ರಿಲ್ 2ರ ಬೆಳಿಗ್ಗೆ ಅವರನ್ನು ವಿಚಾರಿಸಲು ಸಿಬ್ಬಂದಿ ಪ್ರಯತ್ನಿಸಿದ್ದರು. ಕೊಠಡಿಗೆ ಕರೆ ಮಾಡಿದಾಗ ಯಾವುದೇ ಸ್ಪಂದನೆ ಬಂದಿರಲಿಲ್ಲ. ಕೊಠಡಿ ಬಾಗಿಲು ಬಡಿದಾಗ ಸಹ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲಿಗೆ ಜೋರಾಗಿ ಹೊಡೆದಾಗ ಲಾಕ್ ಕಿತ್ತುಬಂದಿದ್ದು, ಒಳಗೆ ಮೂವರೂ ಸತ್ತುಬಿದ್ದಿರುವುದು ಕಂಡುಬಂದಿದೆ ಎನ್ನಲಾಗಿದೆ.