ಫರಿದಾಬಾದ್: ‘ನೀವು ನನಗಾಗಿ ನಿಮಗೇನು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದೀರಿ. ಆದರೆ ನಾನು ಧೈರ್ಯವಂತನಾಗಿರಲು ಸಾಧ್ಯವಾಗಲಿಲ್ಲ. ಅಮ್ಮಾ.. ನೀನು ಈ ಜಗತ್ತಿನಲ್ಲೇ ಬೆಸ್ಟ್ ಅಮ್ಮ. ನಾನು ನಿಮ್ಮೆಲ್ಲರನ್ನೂ ಬಿಟ್ಟು ಹೋಗುತ್ತಿದ್ದೇನೆ. ನನ್ನ ಕ್ಷಮಿಸಿಬಿಡಿ’ ಎಂದು ಪತ್ರವೊಂದನ್ನು ಬರೆದಿಟ್ಟು ಫರಿದಾಬಾದ್ ನ ಪ್ರಸಿದ್ಧ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹರಿಯಾಣದ ಗ್ರೇಟರ್ ಫರಿದಾಬಾದ್ ನಲ್ಲಿರುವ ತನ್ನ ಅಪಾರ್ಟ್ ಮೆಂಟ್ ನ 15ನೇ ಮಹಡಿಯಿಂದ ಹಾರಿ 15 ವರ್ಷದ ಬಾಲಕ ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ. ಆ ಬಾಲಕ ಡಿಸ್ಲೆಕ್ಸಿಯಾ (ಕಲಿಕೆಯ ಅಸ್ವಸ್ಥತೆ)ಯಿಂದ ಬಳಲುತ್ತಿದ್ದ. ತನಗೆ ಶಾಲೆಯ ಟೀಚರ್ಗಳು, ಇತರೆ ಮಕ್ಕಳು ಹೆದರಿಸುತ್ತಿದ್ದರು, ಕಿರುಕುಳ ನೀಡುತ್ತಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬಾಲಕ ಸೂಸೈಡ್ ನೋಟ್ನಲ್ಲಿ ಬರೆದಿದ್ದಾನೆ.
ಆ ಬಾಲಕ ಬರೆದಿರುವ ಸೂಸೈಡ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ಇತರ ಮಕ್ಕಳು ತನಗೆ ಕಿರುಕುಳ ನೀಡಿ, ಬೆದರಿಸುತ್ತಿದ್ದರು ಎಂದು ಆತ ಆರೋಪಿಸಿದ್ದಾನೆ. ಗುರುವಾರ ರಾತ್ರಿ ಬಾಲಕ ತನ್ನ ಮನೆಯಲ್ಲಿ ಒಬ್ಬನೇ ಇದ್ದಾಗ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ಸೇರಿಸಿದ್ದರು.