ನ್ಯೂಸ್ ನಾಟೌಟ್: ಅರಬ್ಬಿ ಸಮುದ್ರದಲ್ಲಿ ನಡೆದ 12 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯು 23 ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಸೊಮಾಲಿಯಾ ಕಡಲ್ಗಳ್ಳರಿಂದ ರಕ್ಷಣೆ ಮಾಡಿದೆ. ಮಾರ್ಚ್ 29ರಂದು ಬೆಳಿಗ್ಗೆ ಐಎನ್ಎಸ್ ಸುಮೇಧಾ ನೌಕೆಯು ಅಪಹರಣಕ್ಕೊಳಗಾದ ಎಫ್ವಿ ಅಲ್-ಕಂಬಾರ್ ಹಡಗಿನ ರಕ್ಷಣೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಿತ್ತು.
ಈ ಕಾರ್ಯಾಚರಣೆಯ ವೇಗ ಹಚ್ಚಿಸಲು ಐಎನ್ಎಸ್ ಸುಮೇಧಾ ಜತೆಗೆ ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆ INS ತ್ರಿಶೂಲ್ ಕೂಡಾ ಸೇರಿಕೊಂಡಿತ್ತು. ಇರಾನ್ ಮೂಲದ ಎಫ್ವಿ ಅಲ್-ಕಂಬಾರ್ ಹಡಗು ಸೊಕೊಟ್ರಾ ಎಂಬ ಪ್ರದೇಶದಿಂದ ಸುಮಾರು 90 ನಾಟಿಕಲ್ ಮೈಲು ನೈಋತ್ಯದಲ್ಲಿತ್ತು. ಈ ಹಡಗಿಗೆ ಒಂಬತ್ತು ಶಸ್ತ್ರಸಜ್ಜಿತ ಕಡಲ್ಗಳ್ಳರು ಹತ್ತಿದ್ದಾರೆ. ಸುದ್ದಿ ತಿಳಿದು ಭಾರತೀಯ ನೌಕಾ ಪಡೆಯು ಕಡಲ್ಗಳ್ಳರೊಂದಿಗೆ ಮಾತುಕತೆ ಆರಂಭಿಸಿತ್ತು.
ರಕ್ತಪಾತವಿಲ್ಲದೆ ಶರಣಾಗುವಂತೆ ಮನವಿ ಮಾಡಿದೆ. ಬಳಿಕ ನೌಕಪಡೆಯು ಕಡಲ್ಗಳ್ಳರನ್ನು ತಮ್ಮ ವಶಕ್ಕೆ ಪಡೆದುಕೊಂಡಿತು. ತಮ್ಮನ್ನು ಕಡಲ್ಗಳ್ಳರಿಂದ ರಕ್ಷಿಸಿದ್ದಕ್ಕೆ ಭಾರತೀಯ ನೌಕಾಪಡೆಗೆ ಪಾಕ್ ನಾವಿಕರು ಧನ್ಯವಾದ ತಿಳಿಸಿದ್ದಾರೆ. ಇದರ ಜತೆಗೆ ‘ಇಂಡಿಯಾ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ. ಭಾರತೀಯ ನೌಕಾಪಡೆ ಇತ್ತೀಚೆಗೆ ಕಡಲ್ಗಳ್ಳರ ದಾಳಿಗಳ ವಿರುದ್ಧ ಹಲವು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿದೆ. ಪಾಕಿಸ್ತಾನದ ಪ್ರಜೆಗಳನ್ನು ರಕ್ಷಿಸಿರುವುದು ಇದೇ ಮೊದಲಲ್ಲ. ಈ ವರ್ಷದ ಜನವರಿಯಲ್ಲಿ ಕಡಲ್ಗಳ್ಳರ ದಾಳಿಗೊಳಗಾದ ಇರಾನಿನ ಧ್ವಜವಿದ್ದ ಮೀನುಗಾರಿಕೆ ನೌಕೆ ಅಲ್ ನಯೀಮಿಯಿಂದ 19 ಪಾಕಿಸ್ತಾನಿಗಳನ್ನು ರಕ್ಷಿಸಲಾಗಿತ್ತು.