ನ್ಯೂಸ್ ನಾಟೌಟ್: ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಯನ್ನು ಸೋಲಿಸಲು ಹಾಗೂ ಮತದಾರರಲ್ಲಿ ಗೊಂದಲ ಮೂಡಿಸಲು ತಂತ್ರಗಳನ್ನು ಹೆಣೆಯುವುದು ಸಾಮಾನ್ಯ. ಅದೇ ರೀತಿ, ತಮಿಳುನಾಡು (Tamil Nadu) ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ (Panneerselvam)ರನ್ನು ಸೋಲಿಸಲು ತಂತ್ರ ರೂಪಿಸಲಾಗಿದೆ.
ತಮಿಳುನಾಡಿನ ಸಿಎಂ ಓ. ಪನ್ನೀರಸೆಲ್ವಂ ಲೋಕಸಭಾ ಚುನಾವಣೆಗೆ ರಾಮನಾಥಪುರಂ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ‘ಪನ್ನೀರಸೆಲ್ವಂ’ ಎಂದೇ ಹೆಸರಿರುವ ಈತರೆ ನಾಲ್ವರು ಸ್ವತಂತ್ರ ಅಭ್ಯರ್ಥಿಗಳಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈಗ ಮಾಜಿ ಸಿಎಂ ಪನ್ನೀರಸೆಲ್ವಂ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಮಾತ್ರವಲ್ಲದೇ, ತಮ್ಮದೇ ಹೆಸರಿನ ಇತರ ನಾಲ್ವರ ವಿರುದ್ಧ ಚುನಾವಣಾ ಕಣದಲ್ಲಿ ಹೋರಾಡಬೇಕಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಇತರ ನಾಲ್ಕು ನಾಮಪತ್ರಗಳು ಮಧುರೈನ ಉಸಿಲಂಪಟ್ಟಿ, ದಕ್ಷಿಣ ಕತ್ತೂರ್, ವಾಗೈಕುಲಂ ಗ್ರಾಮ ಮತ್ತು ಮಧುರೈ ಚೋಲೈ ಅಜಕುಪುರಂನಿಂದ ಸಲ್ಲಿಕೆಯಾಗಿವೆ. ಮಾಜಿ ಮುಖ್ಯಮಂತ್ರಿ ಪನ್ನೀರಸೆಲ್ವಂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ರಾಮನಾಥಪುರದಲ್ಲಿ ಒಟ್ಟು 23 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.