ನ್ಯೂಸ್ ನಾಟೌಟ್: ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ (Dakshina Kannada Loksabha) ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಲ್ಲಿ ಬದಲಾವಣೆಗಳಾಗಬೇಕು ಎನ್ನುವ ಕೂಗು ಬಿಜೆಪಿ ಕಾರ್ಯಕರ್ತರಲ್ಲಿಯೇ ಕೇಳಿ ಬಂದಿತ್ತು. ಮಾತ್ರವಲ್ಲ ದ.ಕ ಜಿಲ್ಲೆಯಲ್ಲಿಯೂ ಹಲವು ಜನರ ಒತ್ತಾಯವೂ ಆಗಿತ್ತು. ಹೀಗಾಗಿ ಬಿಜೆಪಿ ಹೈಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ನಿರ್ಧಾರಕ್ಕೆ ಬಂದಿತ್ತು.ಬಿಜೆಪಿಯಲ್ಲಿ ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಲು ಟಿಕೆಟ್ ನೀಡಿದೆ.
ಇತ್ತ ಟಿಕೆಟ್ ಕೈತಪ್ಪಿದ್ದರಿಂದ ಬೇಸರದಲ್ಲಿರುವ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ಗೆ (Nalin Kumar Kateel )ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ. ಹೌದು.. ನಳಿನ್ ಕುಮಾರ್ ಕಟೀಲ್ ಅವರನ್ನು ಕೇರಳ (Kerala) ಲೋಕಸಭಾ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಇದರ ಜೊತೆ ತೆಲಂಗಾಣ ಮತ್ತು ಮಹಾರಾಷ್ಟ್ರ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಕರ್ನಾಟಕದ ಬಿಜೆಪಿ ನಾಯಕರುಗಳಿಗೆ ನೀಡಲಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲ್ ಮೂರು ಬಾರಿ ಸಂಸದರಾಗಿದ್ದಾರೆ. ಆದ್ರೆ, ಈ ಬಾರಿ ಹೈಕಮಾಂಡ್ ಹೊಸ ಮುಖಕ್ಕೆ ಮಣೆ ಹಾಕಿದೆ. ಟಿಕೆಟ್ ಕೈತಪ್ಪಿದ್ದರು ಸಹ ನಳಿನ್ ಕಟೀಲ್ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಭಾವುಕರಾಗಿ ಮಾತನಾಡಿದ್ದರು. ಅಲ್ಲದೇ ನನಗೆ ಮೂರು ಬಾರಿ ಅವಕಾಶ ನೀಡಿದ್ದಾರೆ. ಪಕ್ಷ ನಿಂತ ನೀರಾಗಬಾರದು, ಹೊಸಬರಿಗೆ ಪ್ರೋತ್ಸಾಹ ನೀಡಬೇಕು. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ, ಪಕ್ಷ ಕಸ ಗುಡಿಸಿ ಎಂದರೂ ಗುಡಿಸುತ್ತೇನೆ ಎಂದಿದ್ದ ಅವರಿಗೆ ಇದೀಗ ಹೊಸ ಜವಾಬ್ದಾರಿ ಸಿಕ್ಕಿದೆ.