ನ್ಯೂಸ್ ನಾಟೌಟ್:ಮಾರ್ಚ್ 16ರಂದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಭಾಗದ ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ನಕ್ಸಲರು ಪತ್ತೆ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬರುತ್ತಿವೆ.ಇದೀಗ ಮತ್ತೆ ನಕ್ಸಲ್ ಸಂಚಾರ ಇದೆ ಅನ್ನೋದಕ್ಕೆ ಪುಷ್ಟಿ ನೀಡುವಂತೆ ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ಬುಧವಾರ ಅಪರಿಚಿತ ಮಹಿಳೆ ಓಡಾಡಿದ್ದು, ಆಕೆ ನಕ್ಸಲ್ ಎಂಬ ಅನುಮಾನ ವ್ಯಕ್ತವಾಗತೊಡಗಿದೆ.ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಕೂಜಿಮಲೆ ಎಸ್ಟೇಟ್ ನಲ್ಲಿ ಬುಧವಾರ ಮಧ್ಯಾಹ್ನ 12ರ ಬಳಿಕ ಅಪರಿಚಿತ ಮಹಿಳೆ ಎಸ್ಟೇಟ್ನ ರಬ್ಬರ್ ತೋಟದಲ್ಲಿ ಸಂಚರಿಸುತ್ತಿರುವುದನ್ನು ಸಿಬ್ಬಂದಿಯೊಬ್ಬರು ಗಮನಿಸಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಹಲವು ಚರ್ಚೆಗಳಿಗೂ ಕಾಣವಾಯಿತು.ಕಳೆದ 10 ದಿನಗಳ ಹಿಂದೆ ಕೂಜಿಮಲೆಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿದ್ದರೂ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಆಗಮಿಸಿ ಶೋಧ ನಡೆಸಿದರೂ ಕೂಡ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಲಾಗಿದೆ. ಶಂಕಿತ ಮಹಿಳೆ ರಬ್ಬರ್ ತೋಟದಿಂದ ಅರಣ್ಯ ಭಾಗದತ್ತ ತೆರಳಿದ್ದಾಳೆ ಎನ್ನಲಾಗಿದೆ.
ಕೂಜಿಮಲೆ ಬಳಿಕ ನಕ್ಸಲರು ಸುಬ್ರಹ್ಮಣ್ಯ ಸಮೀಪದ ಐನೆಕಿದು ಎಂಬಲ್ಲಿಯೂ ಕಾಣಿಸಿಕೊಂಡಿದ್ದಾರೆ ಅನ್ನೋ ವಿಚಾರದ ಬಗ್ಗೆ ವರದಿಯಾಗಿತ್ತು.ಹೀಗಾಗಿ ನಕ್ಸಲ್ ನಿಗ್ರಹ ಪಡೆ ಐನೆಕಿದು, ಕೂಜಿಮಲೆ ಆಸುಪಾಸಿನಲ್ಲೇ ಶೋಧ ಕಾರ್ಯ ನಡೆಸುತ್ತಿದೆ ಎನ್ನಲಾಗಿದ್ದು, ಶಂಕಿತ ಮಹಿಳೆ ಕಾಣಿಸಿಕೊಂಡ ಮಾಹಿತಿ ಲಭ್ಯವಾದ ಕೂಡಲೇ ಎಎನ್ಎಫ್ ತಂಡ ಎಸ್ಟೇಟ್ ಪ್ರದೇಶಕ್ಕೆ ತೆರಳಿ ಶೋಧ ಕಾರ್ಯ ಆರಂಭಿಸಿದೆ.
ನಾಲ್ವರು ಶಂಕಿತ ನಕ್ಸಲರು ಕೂಜಿಮಲೆ ಎಸ್ಟೇಟ್ನ ಅಂಗಡಿಗೆ ಭೇಟಿ ನೀಡಿ ಮಾ. 16ರಂದು ಸಾಮಗ್ರಿ ಖರೀದಿಸಿ ಅರಣ್ಯದತ್ತ ತೆರಳಿದ್ದರು. ಮಾ. 23ರಂದು ನಾಲ್ವರು ಶಂಕಿತರು ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಭೇಟಿ ನೀಡಿ ಊಟ, ಆಹಾರ ಸಾಮಗ್ರಿ ಪಡೆದುಕೊಂಡು ತೆರಳಿದ್ದರು. ಮಾ. 27ರಂದು ಮತ್ತೆ ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ಅಪರಿಚಿತ ಮಹಿಳೆ ಕಾಣಿಸಿಕೊಂಡಿದ್ದಾಳೆ. ಮಾ. 18ರಿಂದ ಈ ಭಾಗ ಸಹಿತ ವಿವಿಧೆಡೆ ನಕ್ಸಲ್ ನಿಗ್ರಹ ಪಡೆ ನಿರಂತರ ಶೋಧ ನಡೆಸುತ್ತಿದೆ.