ನ್ಯೂಸ್ ನಾಟೌಟ್: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಗೋಡೆ ಮೇಲೆ ಡೆತ್ನೋಟ್ ಬರೆದಿಟ್ಟು ಟೆಕ್ಕಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆರೋಪ ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಟೆಕ್ಕಿಯನ್ನು ಸೈಯ್ಯದ್ ಅಕ್ಮಲ್ ಅನ್ಸರ್ ಎಂದು ಗುರುತಿಸಲಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ.
ಇಬ್ಬರು ಮಕ್ಕಳಾದ ಬಳಿಕ ಮಹಿಳೆ ಅಕ್ರಮ ಸಂಬಂಧ ಇಟ್ಟುಕೊಂಡು ಪತಿಗೆ ನಿರಂತರ ಕಿರುಕುಳ ನೀಡುತ್ತಿದ್ದಳು. ಇದೇ ಕಾರಣಕ್ಕೆ ಬೇಸತ್ತು, ಗೋಡೆಯ ಮೇಲೆ ತನ್ನ ಸಾವಿಗೆ ಕಾರಣರಾದವರ ಹೆಸರುಗಳನ್ನ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. 7 ವರ್ಷಗಳ ಹಿಂದೆ ಅಕ್ಮಲ್ ಅನ್ಸರ್ಗೆ ವಿವಾಹವಾಗಿತ್ತು.
ಆರಂಭದಲ್ಲಿ ಇಬ್ಬರೂ ಚೆನ್ನಾಗಿಯೇ ಇದ್ದರು. ಮಕ್ಕಳಾದ ಬಳಿಕ, ಮೃತ ಅಕ್ಮಲ್ ಅನ್ಸರ್ ಮೇಲೆ ಅನುಮಾನ ಪಟ್ಟು ಪತ್ನಿ ಕಿರುಕುಳ ಕೊಡುತ್ತಿದ್ದಳು ಎನ್ನಲಾಗಿದೆ. ಅಷ್ಟೇ ಅಲ್ಲದೇ ಆಗಾಗ ಪತಿ ಬಳಿ ಹಣಕ್ಕೆ ಬೇಡಿಕೆ ಸಹ ಇಡುತ್ತಿದ್ದಳು. ಒಂದು ತಿಂಗಳ ಹಿಂದೆ ಗಲಾಟೆ ಮಾಡಿಕೊಂಡು ಗೋವಿಂದಪುರದ ಗಂಡನ ಮನೆಯಿಂದ ಬಿಟಿಎಂ ಲೇಔಟ್ ತಾಯಿ ಮನೆಗೆ ಬಂದಿದ್ದಳು ಎಂದು ತಿಳಿದು ಬಂದಿದೆ. ಮಾ.11 ರಂದು ಅಕ್ಮಲ್ ಅನ್ಸರ್ನನ್ನು ಮನೆಗೆ ಕರೆಸಿಕೊಂಡು ಪತ್ನಿ ಹಾಗೂ ಪತ್ನಿ ಕುಟುಂಬಸ್ಥರು ಹಲ್ಲೆ ಮಾಡಿದ್ದರು. ಇದರಿಂದ ಮನನೊಂದು ಅಕ್ಮಲ್ ಅನ್ಸರ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಸಹೋದರ ಆರೋಪಿಸಿದ್ದಾನೆ. ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವರದಿ ತಿಳಿಸಿದೆ.