ನ್ಯೂಸ್ ನಾಟೌಟ್: ಆಟೋ ಪಾರ್ಕಿಂಗ್ ವಿಚಾರವಾಗಿ ಬೆಂಗಳೂರಿನ ಬನಶಂಕರಿಯ ಪ್ರಗತಿಪರ ಬಡಾವಣೆಯಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಸೈಯದ್ ತಾಹ, ತಾಹ ತಂದೆ ಕರೀಮ್ ಹಾಗು ಅಫ್ರೀದ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 143, 148 , 358 ಅಡಿ ಎಫ್ಐಆರ್ ದಾಖಲಾಗಿದೆ.
ಘಟನೆಯಲ್ಲಿ ಬೇರೆಯವರ ಪಾತ್ರದ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಮತ್ತೊಂದೆಡೆ ಮನೆ ಮೇಲೆ ಹಾರಿಸಲಾಗಿರುವ ಭಗವಾಧ್ವಜದ ಕಾರಣಕ್ಕೆ ಹಲ್ಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಸಣ್ಣ ರಸ್ತೆಯ ಏರಿಯಾದ ಅಕ್ಕಪಕ್ಕದ ನಿವಾಸಿಗಳಾದ ಸುಕುಮಾರ್ ಹಾಗೂ ಸೈಯದ್ ತಾಹ ಎಂಬವರು ಆಟೋ ಪಾರ್ಕಿಂಗ್ ವಿಚಾರಕ್ಕೆ ಜಗಳವಾಡಿಕೊಂಡಿದ್ದರು.
ಸುಕುಮಾರ್ ತಮ್ಮ ಮನೆಯ ಮುಂದೆ ಆಟೋ ನಿಲ್ಲಿಸಿಕೊಂಡಿದ್ದರು. ಸೈಯದ್ ತಾಹ ಮನೆಯ ಮುಂದೆ ಆತನ ಸಂಬಂಧಿ ಆಟೋ ನಿಲ್ಲಿಸಿದ್ದ. ವೇಗವಾಗಿ ಬಂದು ಆಟೋ ನಿಲ್ಲಿಸಿದ್ದಕ್ಕೆ ತಾಹ ಸಂಬಂಧಿಯನ್ನು ಪಕ್ಕದ ಮನೆ ನಿವಾಸಿ ಸುಕುಮಾರ್ ಹಾಗೂ ಕುಟುಂಬಸ್ಥರು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು ಇದೇ ವೇಳೆ ಅಪರಿಚಿತ ವ್ಯಕ್ತಿ ಪಕ್ಕದಲ್ಲೇ ಇದ್ದ ಮಸೀದಿಯಿಂದ ಹೊರ ಬಂದ ಜೊತೆಗಾರರ ಜೊತೆ ಬಂದು ಮತ್ತೆ ಗಲಾಟೆ ಮಾಡಿ ಸುಕುಮಾರ್ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಲ್ಲಿ 8 ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮತ್ತೊಂದೆಡೆ ಮನೆ ಮೇಲೆ ಹಾರಿಸಿರುವ ಭಗವಾನ್ ಧ್ವಜದ ಕಾರಣಕ್ಕೆ ಹಲ್ಲೆ ಮಾಡಿರೋ ಸಂದೇಹ ಉಂಟಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸರು ತನಿಖೆ ನಡೆಸುತ್ತಾರೆ ಎಂದು ವರದಿ ತಿಳಿಸಿದೆ.