ನ್ಯೂಸ್ ನಾಟೌಟ್: ಕೆಲವೊಂದ್ಸಲ ಮೊಬೈಲ್ ಒಳ್ಳೆಯದಲ್ಲ.. ಮಂಗನ ಕೈಗೆ ಮಾಣಿಕ್ಯ ಇದ್ದಂತೆ ಎಂದೆಲ್ಲ ಜನ ಬೈಯೋದಕ್ಕೆ ಶುರು ಮಾಡ್ತಾರೆ. ಆದರೆ ಇನ್ನೂ ಕೆಲವರು ಸೋಶಿಯಲ್ ಮೀಡಿಯಾ ಮೂಲಕ ಹಣವನ್ನು ಸಂಪಾದಿಸುತ್ತಾರೆ. ಇನ್ನೂ ಕೆಲವರು ಯೂ ಟ್ಯೂಬ್ ಮೂಲಕ ಹಲವು ವಿಚಾರಗಳನ್ನು ಕಲಿತುಕೊಳ್ಳುತ್ತಾರೆ.ಅಂತಹ ಸಾಲಿಗೆ ಇಲ್ಲೊಬ್ಬ ರೈತ ಸೇರಿಕೊಳ್ಳುತ್ತಾರೆ.ಇವರು ಯೂಟ್ಯೂಬ್ನಿಂದ ಕಾಶ್ಮೀರ್ನಲ್ಲಿ ಬೆಳೆಯುವ ಸೇಬು (apple) ವನ್ನು ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ಬೆಳೆದು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ.
ಅಂದಹಾಗೆ ಕಾಶ್ಮಿರದ ಚುಮು ಚುಮು ಚಳಿ ಮಳೆಯಂತೆ ಬೀಳುವ ಮಂಜಿನ ನಡುವೆ ಬೆಳೆಯ ಬೇಕಾದ ಸೇಬುವನ್ನು ಸಿಲಿಕಾನ್ ಸಿಟಿ ಹೊರವಲಯದ ಹೊಸಕೋಟೆ ಬಳಿ ಬೆಳೆದಿದ್ದು, ರುಚಿಯಲ್ಲೂ ಕಾಶ್ಮೀರಿ ಸೇಬುವಿನಂತೆ ಎಲ್ಲರ ಮನಸೆಳೆದಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಬಳಿಯ ಸಿದ್ದೆನಹಳ್ಳಿ ಗ್ರಾಮದ ರೈತ ಬಸವರಾಜು, ಏನಾದ್ರು ವಿಭಿನ್ನವಾಗಿ ಬೆಳೆ ಬೆಳೆದು ಎಲ್ಲರಿಗೂ ಮಾದರಿಯಾಗಬೇಕು ಅಂತಿರುವಾಗಲೇ ಸೇಬು ಬೆಳೆ ಬೆಳೆಯುವ ವಿಡಿಯೋವನ್ನ ಯೂಟ್ಯೂಬ್ನಲ್ಲಿ ನೋಡಿದ್ದರಂತೆ. ಹೀಗಾಗಿ ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ ಬಿಜಾಪುರದ ರೈತರನ್ನ ಸಂಪರ್ಕಿಸಿದ ರೈತ ಬಸವರಾಜು ನಂತರ ಬಿಜಾಪುರದಿಂದ 450 ಗಿಡಗಳನ್ನ ತಂದು ಇಲ್ಲಿ ನಾಟಿ ಮಾಡಿದ್ದಾರೆ.
ಜೊತೆಗೆ ಸೇಬು ಗಿಡಗಳಿಗೆ ಯಾವುದೇ ರಾಸಾಯನಿಕ ಔಷದಿಗಳನ್ನ ಬಳಸದೆ ಕಪ್ಪು ಮಣ್ಣು, ಹೊಂಗೆ ಹಿಂಡಿ ಮತ್ತು ಬೇವಿನ ಹಿಂಡಿಯನ್ನ ಹಾಕಿ ಬೆಳೆ ಬೆಳೆದಿದ್ದು ಇದೀಗ ಭರ್ಜರಿ ಸೇಬು ಬೆಳೆ ಬೆಳೆದಿದ್ದಾರೆ. 450 ಗಿಡಗಳಲ್ಲಿ 12 ಗಿಡಗಳು ಹಾಳಾಗಿದ್ದು ಉಳಿದ ಗಿಡಗಳು ಭರ್ಜರಿ ಸೇಬು ಫಸಲು ನೀಡಿದ್ದು ಬಿಸಿಲ ನಡುವೆ ಬೆಳೆದ ಕೆಂಪು ಸೇಬು ಕಂಡು ಎಲ್ಲರೂ ಶಾಕ್ ಆಗಿದ್ದಾರೆ.ಜೊತೆಗೆ ರೈತ ಬೆಳೆದಿರುವ ಸೇಬು ಬೆಳೆಯನ್ನ ವ್ಯಾಪಾರಿಗಳು ತೋಟದ ಬಳಿಗೆ ಬಂದು ಕೆಜಿಗೆ 120 ರೂಪಾಯಿಯಂತೆ ಕೊಂಡುಕೊಂಡು ಹೋಗ್ತಿದ್ದು ರೈತನಿಗೆ ಉತ್ತಮ ಆದಾಯ ಸಹ ತಂದುಕೊಡ್ತಿದೆ. ಇನ್ನೂ ಯೂಟ್ಯೂಬ್ ನೋಡಿ ಸೇಬು ಬೆಳೆ ಬೆಳೆದ ರೈತನನ್ನ ಕಂಡು ಗ್ರಾಮಸ್ಥರ ಜೊತೆಗೆ ಕುಟುಂಬಸ್ಥರು ಸಹ ಶಾಕ್ ಆಗಿದ್ದಾರೆ.