ನ್ಯೂಸ್ ನಾಟೌಟ್: ಕುಕ್ಕೆ ಸುಬ್ರಹ್ಮಣ್ಯ ಸಮೀಪವಿರುವ ಐನೆಕಿದು ಗ್ರಾಮದ ಕಾಡಿನಂಚಿನ ಮನೆಗೆ ಶನಿವಾರ ಸಂಜೆ ನಾಲ್ವರು ನಕ್ಸಲರು ಆಗಮಿಸಿರುವ ಘಟನೆ ಬಗ್ಗೆ ವರದಿಯಾಗಿದ್ದು,ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ವ್ಯಕ್ತಿಯೊಬ್ಬರ ಮನೆಗೆ ಬಂದು ಅವರು ಅಕ್ಕಿ ಕೇಳಿ ಪಡೆದು ಒಂದು ತಾಸು ಕಾಲ ಮಾತುಕತೆ ನಡೆಸಿ ಹಿಂತಿರುಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಈ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ದಿನಕ್ಕೊಂದು ಅಪ್ ಡೇಟ್ಸ್ ಸಿಗ್ತಾ ಇದ್ದು,ಇದೀಗ ಕೂಜಿಮಲೆಯಲ್ಲಿ ಕಾಣಿಸಿಕೊಂಡ ನಕ್ಸಲರು ಐನೆಕಿದು ಗ್ರಾಮಕ್ಕೆ ಬಂದರೇ ಎನ್ನುವ ಬಗ್ಗೆ ಚರ್ಚೆಗಳು ನಡಿತಿವೆ.
ನಿನ್ನೆ(ಶನಿವಾರ ಮಾರ್ಚ್ 23) ಸಂಜೆ ಮಳೆಯಾಗುತ್ತಿದ್ದ ಸಂದರ್ಭ ನಕ್ಸಲರು ವ್ಯಕ್ತಿಯೊಬ್ಬರ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಮನೆಯವರ ಜೊತೆ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ತಮ್ಮ ಮೊಬೈಲ್ ಚಾರ್ಜ್ ಮಾಡಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದ್ದು, ಮನೆಯವರ ಬಳಿ ಎರಡು ಕೆಜಿಯಷ್ಟು ಅಕ್ಕಿ, ದಿನಸಿ ಸಾಮಗ್ರಿ ಪಡೆದು ಅರಣ್ಯದತ್ತ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ವರ ತಂಡ ಮನೆಯೊಳಗೆ ಬಂದಿದೆ ಎನ್ನಲಾಗಿದ್ದರೂ ಮಾಮೂಲಿ ಡ್ರೆಸ್ನಲ್ಲಿದ್ದ ಅವರ ಕೈಯಲ್ಲಿ ಶಸ್ತ್ರಾಸ್ತ್ರಗಳು ಇತ್ತು ಎನ್ನುವ ಮಾಹಿತಿಯಿದೆ. ಅದನ್ನು ಪಕ್ಕಕ್ಕಿಟ್ಟು ಮನೆಯ ಹೊರಗಡೆ ನಿಂತು ಮಾತನಾಡಿದ್ದಾರೆ.ಬಳಿಕ ಊಟ ಹಾಗೂ ಅಕ್ಕಿ ನೀಡುವಂತೆಯೂ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ದಕ್ಷಿಣ ಕನ್ನಡ- ಕೊಡಗು ಗಡಿಭಾಗದ ಕೂಜಿಮಲೆಯ ಎಸ್ಟೇಟ್ ಬಳಿಗೆ ಬಂದಿದ್ದ ನಾಲ್ವರು ನಕ್ಸಲರು ಅಲ್ಲಿನ ಅಂಗಡಿಯಿಂದ 25 ಕೆಜಿ ಅಕ್ಕಿ ಜತೆಗೆ 3500 ರೂ. ಮೌಲ್ಯದ ದಿನಸಿ ಸಾಮಗ್ರಿ ಖರೀದಿಸಿ ತೆರಳಿದ್ದರು. ಕೂಜಿಮಲೆ ಮತ್ತು ಐನೆಕಿದು ನಡುವೆ ಸುಮಾರು 25 ಕಿ.ಮೀ. ಅಂತರವಿದ್ದು, ಈ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ದಳ ನಿರಂತರ ಕೂಂಬಿಗ್ ನಡೆಸುತ್ತಿದೆ. ಈ ನಡುವೆಯೂ ನಕ್ಸಲರು ಮತ್ತೆ ಪ್ರತ್ಯಕ್ಷಗೊಂಡಿದ್ದಾರೆ. ನಕ್ಸಲರು ಭೇಟಿ ನೀಡಿದ ಪ್ರದೇಶ ಕುಮಾರಪರ್ವತ ಸಾಲಿನ ಪಾಟಿಕುಮೇರಿ ದಟ್ಟ ಕಾಡಿಗೆ ಹತ್ತಿರವಿದೆ. ಇಲ್ಲಿಂದ ಕೊಡಗಿನ ಸೋಮವಾರಪೇಟೆ ಮತ್ತು ಇನ್ನೊಂದು ದಾರಿಯಾಗಿ ಗಾಳಿಬೀಡು ಸಂಪರ್ಕಿಸಲು ದಾರಿಯಿದೆ. ಅಲ್ಲಿಂದ ಸಂಪಾಜೆ ಗಡಿ ಮೂಲಕ ಕೇರಳದ ಅರಣ್ಯದೊಳಗೆ ಸೇರಲು ಸಾಧ್ಯವಿದೆ ಎಂದು ಸ್ಥಳೀಯರು ಹೇಳುತ್ತಾರೆ.