ನ್ಯೂಸ್ ನಾಟೌಟ್: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿ ಜೈಲು ಪಾಲಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಜೈಲಿನಿಂದಲೇ ಆಡಳಿತ ನಡೆಸುತ್ತೇನೆ ಎಂದು ಹೇಳುವುದು ಪ್ರಾಯೋಗಿಕವಾಗಿ ಸರಿಯಲ್ಲ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ.ಆಚಾರಿ ಹೇಳಿದ್ದಾರೆ.
ಗುರುವಾರ(ಮಾ.21) ಅರವಿಂದ್ ಕೇಜ್ರಿವಾಲ್ ಬಂಧನವಾದ ನಂತರ ಆಮ್ ಆದ್ಮಿ ಪಕ್ಷದ ಮುಖಂಡರು, ಕೇಜ್ರಿವಾಲ್ ಜೈಲಿನಿಂದಲೇ ತಮ್ಮ ಸರ್ಕಾರ ನಡೆಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಈ ರೀತಿಯಾದ ಆಡಳಿತ ನಡೆಸಬಹುದೇ ಎಂಬ ಚರ್ಚೆ ಶುರುವಾಗಿದೆ. ಈ ಕುರಿತು ಪಿ.ಡಿ.ಟಿ.ಆಚಾರಿ ಮಾತನಾಡಿ, ಆಮ್ ಆದ್ಮಿ ಪಕ್ಷವು ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿದೆ. ಆಪ್ ಶಾಸಕಾಂಗ ಪಕ್ಷವು ಕೇಜ್ರಿವಾಲ್ ಅವರ ಮೇಲೆ ಯಾವುದೇ ಅವಿಶ್ವಾಸ ಮಂಡನೆಯ ಪ್ರಸ್ತಾಪ ದಾಖಲಿಸಿಲ್ಲ. ಯಾವುದೇ ನ್ಯಾಯಾಲಯವು ರಾಜೀನಾಮೆ ನೀಡುವಂತೆ ಆದೇಶಿಸಿಲ್ಲ.
ಇದನ್ನೆಲ್ಲ ಗಮನಿಸಿದರೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ತಪ್ಪೇನಿಲ್ಲ. ಆದರೆ, ಜೈಲಿನಿಂದಲೇ ಆಡಳಿತ ನಡೆಸುತ್ತೇನೆ ಎಂದು ಹೇಳುವುದು ಕಾರ್ಯಸಾಧ್ಯವಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿ ಆಡಳಿತ ನಡೆಸುವಾಗ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಸಂಪುಟ ಸಭೆಗಳ ಅಧ್ಯಕ್ಷತೆ ವಹಿಸಬೇಕು. ಕಡತಗಳನ್ನು ವಿಲೇವಾರಿ ಮಾಡಬೇಕು. ಇದನ್ನು ವೈಯಕ್ತಿಕವಾಗಿ ಅಥವಾ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಡಬಹುದು. ಆದರೆ, ಜೈಲು ಶಿಕ್ಷೆಯ ಸಂದರ್ಭದಲ್ಲಿ ಇವೆರಡೂ ಸಾಧ್ಯವಿಲ್ಲ. ಸದ್ಯದ ತಾತ್ಕಾಲಿಕ ಬಿಕ್ಕಟ್ಟನ್ನು ಹೋಗಲಾಡಿಸಲು ಆಡಳಿತದ ಜವಾಬ್ದಾರಿಯನ್ನು ಬೇರೆಯವರಿಗೆ ಹಸ್ತಾಂತರಿಸುವುದು ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಅಭಿಪ್ರಾಯಪಟ್ಟರು.