ನ್ಯೂಸ್ ನಾಟೌಟ್ : ಇನ್ಮುಂದೆ ದೇವಸ್ಥಾನಗಳಿಗೆ ಹೆಂಗೆಂಗೋ, ಯಾವುದೋ ಡ್ರೆಸ್ ನಲ್ಲಿಹೋದ್ರೆ ಒಳಕ್ಕೆ ಪ್ರವೇಶಿಸೋಕೆ ಬಿಡಲ್ಲ, ಹೌದು, ರಾಜಧಾನಿಯ ಹಲವು ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು (Dress Code in Temples) ಶುರುಮಾಡಲಾಗಿದೆ. ಈಗಾಗಲೇ ಜಾರಿಯಲ್ಲಿರುವ ಹಲವು ಕಡೆಗಳಲ್ಲಿ ಬಿಗಿ ಮಾಡಲಾಗಿದೆ.ರಾಜ್ಯದ ಕೆಲವು ದೇವಸ್ಥಾನಗಳ ಎದುರು ಭಾಗದಲ್ಲಿ ಈ ಬಗ್ಗೆ ಫಲಕ ಅಳವಡಿಸಿದ್ದರೂ ಕೆಲವರು ಕ್ಯಾರೇ ಅನ್ನುತ್ತಿರಲಿಲ್ಲ. ಇದೀಗ ಬೆಂಗಳೂರಿನ ಹಲವು ದೇವಸ್ಥಾನಗಳ ಮುಂದೆ ಈ ಕುರಿತು ಬೋರ್ಡ್ ಅಳವಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸೀರೆ, ಚೂಡಿದಾರ್ ಬಿಟ್ರೆ ಮಹಿಳೆಯರಿಗೆ ಬೇರೆ ಡ್ರೆಸ್ ಹಾಕಿಕೊಂಡು ಬಂದ್ರೆ ಒಳ ಪ್ರವೇಶವಿಲ್ಲ ಅನ್ನೋ ಬೋರ್ಡ್ಗಳನ್ನು ಕೆಲ ಪ್ರಸಿದ್ಧ ದೇವಸ್ಥಾನಗಳ ಮುಂದೆ ನೀವು ನೋಡಿರಬಹುದು. ಇದೀಗ ಸದ್ಯ ಸಾಂಪ್ರದಾಯಿಕ ಹಾಗೂ ಸಭ್ಯ ಉಡುಪು ಧರಿಸಿ ಬಂದವರಿಗೆ ಮಾತ್ರ ದೇವಸ್ಥಾನದೊಳಗೆ ಪ್ರವೇಶ (Dress Code in Temples) ನೀಡಲಾಗುತ್ತದೆ. ಶಾರ್ಟ್ಸ್, ಟೀ ಶರ್ಟ್, ನೈಟ್ ಪ್ಯಾಂಟ್ ಧರಿಸಿ ಬಂದವರಿಗೆ ಪ್ರದೇಶವಿಲ್ಲ ಎಂದು ಸೂಚಿಸುವ ಫಲಕಗಳನ್ನು ಬೆಂಗಳೂರಿನ ಕೆಲ ದೇವಸ್ಥಾನಗಳ ಎದುರಲ್ಲಿ ಬೋರ್ಡ್ ಅಳವಡಿಸಲಾಗಿದೆ.
ಇತ್ತೀಚೆಗೆ, ದೇವಾಲಯದ ಒಳಗೆ ವಸ್ತ್ರ ಸಂಹಿತೆ (Dress Code in Temples) ಪಾಲಿಸುವಂತೆ, ವಿದೇಶಿ ವಸ್ತ್ರಗಳು ಹಾಗೂ ತುಂಡುಡುಗೆ ಧರಿಸಿದವರಿಗೆ ದೇವಾಲಯದ ಒಳಗೆ ಪ್ರವೇಶಕ್ಕೆ ಅವಕಾಶ ನೀಡದಂತೆ ʼಟೆಂಪಲ್ ಇನ್ಸೈಡ್ ನೋ ವೆಸ್ಟರ್ನ್ ಡ್ರೆಸ್ʼ (Temple inside no western dress) ಅಭಿಯಾನ ಆರಂಭಿಸಲಾಗಿತ್ತು. ಇದರ ಬಳಿಕ ರಾಜಧಾನಿಯ ದೇವಾಲಯಗಳಲ್ಲಿ ಅಧಿಕೃತವಾಗಿ ವಸ್ತ್ರಸಂಹಿತೆ ಜಾರಿಯಾಗಿತ್ತು.
ಕರ್ನಾಟಕ ದೇವಸ್ಥಾನ- ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಈ ಹಿಂದೆಯೂ ಇದಕ್ಕೆ ಒತ್ತಾಯ ಮಾಡಲಾಗಿತ್ತು. ಇದನ್ನು ಹಿಂದೂ ಸಂಘಟನೆಗಳು ಬೆಂಬಲಿಸಿದ್ದವು. ದೇವಾಲಯಗಳಲ್ಲಿ ತುಂಡು ಬಟ್ಟೆಗಳನ್ನು ಧರಿಸಿ ಬರುವ ಯುವಕ ಯುವತಿಯರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಗಿತ್ತು.
ಕಳೆದ ತಿಂಗಳು ರಾಜ್ಯದ ಎಲ್ಲಾ ಖಾಸಗಿ ದೇವಾಲಯ ಮತ್ತು ಮಠಗಳ ಅರ್ಚಕರು ಮತ್ತು ಟ್ರಸ್ಟಿಗಳ ಸಭೆ ಮಾಡಲಾಗಿತ್ತು. ಸಭೆಯಲ್ಲಿ ರಾಜ್ಯದ ಎಲ್ಲಾ ಅರ್ಚಕರು ಹಾಗೂ ಟ್ರಸ್ಟಿಗಳು ಜನವರಿಯಿಂದ ಈ ನಿಯಮವನ್ನು ಜಾರಿ ಮಾಡಬೇಕೆಂದು ತೀರ್ಮಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜನವರಿಯಿಂದ ರಾಜ್ಯದ ಹಾಗೂ ರಾಜಧಾನಿಯ ದೇವಾಲಯಗಳಲ್ಲಿ ಭಾರತೀಯ ಉಡುಪುಗಳನ್ನು ಧರಿಸಿ ಬರುವವರಿಗೆ ಮಾತ್ರ ದೇವರ ದರ್ಶನ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ.
ಸೂಚನೆಯ ಪ್ರಕಾರ ಪುರುಷರು ದೇವಾಲಯಕ್ಕೆ ಚಡ್ಡಿ, ಬರ್ಮುಡಾ, ರಿಪ್ಟ್ಡ್ (ಹರಿದ) ಜೀನ್ಸ್, ಎದೆ ಕಾಣುವ ಟಿಶರ್ಟ್ ಧರಿಸಿಕೊಂಡು ಬರುವಂತಿಲ್ಲ. ಮಹಿಳೆಯರು ಸ್ಕರ್ಟ್, ಮಿಡಿ, ರಿಪ್ಟ್ಡ್ ಜೀನ್ಸ್, ಶಾರ್ಟ್ಸ್ ಹಾಕಿಕೊಂಡು ಬಂದರೆ ಟೆಂಪಲ್ಗೆ ನೋ ಎಂಟ್ರಿ. ಸಭ್ಯವಾದ ಭಾರತೀಯ ಉಡುಗೆಗಳಿಗೆ ಮಾತ್ರ ಅವಕಾಶ. ಸ್ತ್ರೀಯರು ಸೀರೆ, ಚೂಡಿದಾರ್, ಕುರ್ತಾ ಧರಿಸಬೇಕು. ಪುರುಷರು ಪಂಚೆ, ಶೇರ್ವಾನಿ, ಪ್ಯಾಂಟ್, ಅಂಗಿ ಧರಿಸಬೇಕು. ಬಿಗಿಯಾದ ಜೀನ್ಸ್ಗಳನ್ನು ಧರಿಸುವಂತಿಲ್ಲ.
ಕೇರಳದ ಹಲವಾರು ದೇವಾಲಯಗಳಲ್ಲಿ ಈ ಬಗ್ಗೆ ಬಿಗಿಯಾದ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಕೇರಳದ ಕೆಲವು ಕಡೆ ಹಾಗೂ ದಕ್ಷಿಣ ಕನ್ನಡ- ಉಡುಪಿಯ ಕೆಲವು ದೇವಾಲಯಗಳಲ್ಲಿ ಪುರುಷರು ಅಂಗಿ ಧರಿಸಿ ದೇವಾಲಯದ ಒಳಗೆ ಪ್ರವೇಶಿಸುವಂತಿಲ್ಲ. ಮುಜರಾಯಿ ಇಲಾಖೆ ಈ ಬಗ್ಗೆ ಯಾವುದೇ ನಿರ್ದೇಶನ ಹೊಂದಿಲ್ಲ. ಆದರೆ ಆಯಾ ದೇವಸ್ಥಾನದ ಆಚಾರಸಂಹಿತೆಗೆ ಅನುಗುಣವಾಗಿ ನಿಯಮಗಳನ್ನು ಪಾಲಿಸಲಾಗುತ್ತಿದೆ.