ನ್ಯೂಸ್ ನಾಟೌಟ್ : ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದೆ. ಸೈಬರ್ ವಂಚಕರು ಹೇಗೆಲ್ಲಾ ವಂಚನೆ ಮಾಡಲು ಸಾಧ್ಯವಿದೆಯೋ ಅದನ್ನೆಲ್ಲ ಪ್ರಯೋಗ ಮಾಡಿ ಜನರನ್ನು ಯಮಾರಿಸುತ್ತಿದ್ದಾರೆ. ಇದೀಗ ನಕಲಿ ಸಂದೇಶಗಳನ್ನು ಕಳುಹಿಸಿ ಜನರ ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುವ ದಂಧೆ ನಡೆಯುತ್ತಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಸೈಬರ್ ಖದೀಮರು ಕೂಡ ಫುಲ್ ಅಲರ್ಟ್ ಆಗಿದ್ದು, ಚುನಾವಣೆ ಹೊತ್ತಲ್ಲೇ ನಕಲಿ ಮೆಸೇಜ್ಗಳ (Fake Messages) ಹಾವಳಿ ಸಹ ಹೆಚ್ಚಾಗುತ್ತಿವೆ. ಇಲ್ಲಿ ಸ್ವಲ್ಪ ಯಾಮಾರಿದ್ರೂ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಬೀಳೋದು ಗ್ಯಾರಂಟಿ.ಹೌದು. ಚುನಾವಣೆ ಸಂದರ್ಭದಲ್ಲಿ ಪ್ರಧಾನಿಗಳ ಫೋಟೋ ಬಳಸಿ ಫೇಕ್ ಮೆಸೇಜ್ ಹರಿಬಿಡಲಾಗುತ್ತಿದೆ. ಎಲ್ಲರ ಖಾತೆಗೆ ಮೋದಿಯವರ ಕಡೆಯಿಂದ 5,000 ರೂಪಾಯಿ ಅನ್ನೋ ಫೇಕ್ ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ.
5,000 ಪಡೆದಿದ್ದೀರಿ, ಇದನ್ನ ನಿಮ್ಮ ಅಕೌಂಟ್ಗೆ ಹಾಕಲು ಲಿಂಕ್ ಮಾಡಿ ಎಂಬ ಸಂದೇಶ ಕಳುಹಿಸುತ್ತಾರೆ. ಲಿಂಕ್ ಕ್ಲಿಕ್ ಮಾಡಿದರೆ ಕೂಡಲೇ ಖಾತೆಯಿಂದ ಹಣ ಎಗರಿಸುವಂತೆ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ. ಈಗಾಗಲೇ ಕುರುಡು ಕಾಂಚಾಣದ ಓಡಾಟ ಸಹ ಜೋರಾಗಿರೋದ್ರಿಂದ ಜನರು ಕೂಡ ಸುಲಭವಾಗಿ ಮೋಸದ ಬಲೆಗೆ ಬೀಳ್ತಿದ್ದಾರೆ. ಕೂಡಲೇ ಇದಕ್ಕೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳುವಂತೆ ಚುನಾವಣಾಧಿಕಾರಿಗಳು (Election Officers) ಹಾಗೂ ಸೈಬರ್ ಅಪರಾಧ ವಿಭಾಗಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ದೂರು ನೀಡಿ, ಕ್ರಮಕ್ಕೆ ಒತ್ತಾಯಿಸಿದೆ.
ಇನ್ನೂ ಈ ರೀತಿಯ ಮೆಸೆಜ್ಗಳ ಬಗ್ಗೆ ಸೈಬರ್ ತಜ್ಞರು ಜನರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕಳ್ಳರು ಸುಲಭವಾಗಿ ತಂತ್ರಜ್ಞಾನವನ್ನ ಬಳಸಿಕೊಂಡು ಸಾಮಾನ್ಯರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ.ಹೀಗಾಗಿ ದಯವಿಟ್ಟು ವೈಯಕ್ತಿಕ ಒಟಿಪಿಗಳನ್ನ ಶೇರ್ ಮಾಡಬೇಡಿ. ಅನ್ಯ ಸಂದೇಶಗಳಿಂದ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡದಂತೆ ತಜ್ಞರು ಸಲಹೆ ನೀಡಿದ್ದಾರೆ.